ಅಮೆರಿಕದಲ್ಲಿ ಗುಂಡಿನ ದಾಳಿಗೆ ಕಾಸರಗೋಡು ಮೂಲದ ವ್ಯಕ್ತಿ ಬಲಿ
ಕಾಸರಗೋಡು, ಜೂ.25: ಅಮೇರಿಕದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಕಾಸರಗೋಡು ಬದಿಯಡ್ಕ ನಿವಾಸಿಯೋರ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಈ ಕುರಿತು ಸಂಬಂಧಿಕರಿಗೆ ಮಾಹಿತಿ ಲಭಿಸಿದೆ.
ಬದಿಯಡ್ಕ ಪಳ್ಳತ್ತಡ್ಕದ ಕುಮಾರ್ ಪ್ರಸಾದ್ (40) ಮೃತಪಟ್ಟವರು. ಅಮೆರಿಕದಲ್ಲಿ ಆಯುರ್ವೇದ ಕಂಪೆನಿ ನಡೆಸುತ್ತಿದ್ದರು. ವೆನಿವೆಲಾ ಎಂಬಲ್ಲಿ ಈ ಘಟನೆ ನಡೆದಿದೆ.
ಕಂಪೆನಿ ಪರಿಸರದಲ್ಲಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು , ಕುಮಾರ್ ಪ್ರಸಾದ್ ಮತ್ತು ಜೊತೆಗಿದ್ದ ಕಂಪೆನಿ ಉದ್ಯೋಗಿಯೋರ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವರ್ಷಗಳಿಂದ ಇವರ ಕುಟುಂಬ ಅಮೇರಿಕಾದಲ್ಲಿ ವಾಸಿಸುತ್ತಿದೆ. ದಶಕಗಳಿಂದ ತಂದೆ ಕೇಶವ ಭಟ್ ಕಂಪೆನಿ ನಡೆಸುತ್ತಿದ್ದರು. 2010 ರಲ್ಲಿ ತಂದೆ ನಿಧನರಾದ ಬಳಿಕ ಕುಮಾರ್ ಪ್ರಸಾದ್ ಕಂಪೆನಿ ನಡೆಸಿಕೊಂಡು ಬರುತ್ತಿದ್ದರು. ಉಡುಪಿ ನಿವಾಸಿಯಾಗಿರುವ ತಾಯಿ ದೇವಕಿ, ಸಹೋದರಿ ಸುಮಾ, ಪವನ, ಅನಸೂಯ ಮೊದಲಾದವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಕುಮಾರ್ ಅವಿವಾಹಿತರಾಗಿದ್ದರು .
ಕುಮಾರ್ ಪ್ರಸಾದ್ ಕುಟುಂಬ ಸಹಿತ ಒಂದು ವರ್ಷದ ಹಿಂದೆ ಊರಿಗೆ ಬದಿಯಡ್ಕ ದಲ್ಲಿರುವ ತರವಾಡು ಮನೆಗೆ ಬಂದು ತೆರಳಿದ್ದರು. ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.