ನೀರನ್ನು ಪೋಲು ಮಾಡುವುದು ಅಪರಾಧ: ಶ್ರೀಪಡ್ರೆ
ಮಂಗಳೂರು, ಜೂ.25: ಜನರಲ್ಲಿ ಬಾವಿ ನೀರಿನ ಮೇಲೆ ಆಸಕ್ತಿ ಕಡಿಮೆಯಾಗಿದ್ದು ಬೋರ್‌ವೆಲ್ ಮೇಲೆ ವ್ಯಾಮೋಹ ಹೆಚ್ಚಾಗಿದೆ ಎಂದು ಪರಿಸರ ತಜ್ಞ ಶ್ರೀಪಡ್ರೆ ಹೇಳಿದರು.
ನಗರದ ಸಂತ ಆಗ್ನೇಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ಆಯೋಜಿಸಲಾಗಿದ್ದ ನೆಲ-ಜಲ ಸಂರಕ್ಷಣೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುತ್ತಿದ್ದರೂ ಬೇಸಿಗೆಯಲ್ಲಿ ಟ್ಯಾಂಕರ್ ನೀರಿಗೆ ಅವಲಂಬಿಸಿರುವುದು ಪ್ರಗತಿಯ ಲಕ್ಷಣವಲ್ಲ, ಇದು ನಾಚಿಕೆಗೇಡು ವಿಚಾರ. ರಾಜ್ಯದಲ್ಲಿ ಸುರಿಯುವ ಮಳೆಯ ಶೇ.8 ರಿಂದ 10ರಷ್ಟು ಮಾತ್ರ ಭೂಮಿಗೆ ಹೋಗುತ್ತಿದೆ. ಉಳಿದ ನೀರು ಹರಿದು ವ್ಯರ್ಥವಾಗುತ್ತಿದೆ ಎಂದು ಹೇಳಿದರು
ಜನರು ಹಣವನ್ನು, ಮೊಬೈಲ್ ಕರೆನ್ಸಿಯನ್ನು ಲೆಕ್ಕ ಮಾಡುವಂತೆ ನೀರಿನ ಲೆಕ್ಕವನ್ನು ಹಾಕುವ ಕೆಲಸವನ್ನು ಮಾಡಬೇಕು.
ಕರಾವಳಿಯ ಜನರು ವರ್ಷವಿಡಿ ನೀರು ಉಪಯೋಗಿಸುವುದಕ್ಕಿಂದ ಹೆಚ್ಚಿನ ನೀರು ತಮ್ಮ ಛಾವಣಿಯ ಮೇಲಿಂದ ಹರಿದುಹೋಗುತ್ತಿದೆ. ಇದನ್ನು ಇಂಗಿಸುವ ಕೆಲಸ ಮಾಡಿದರೆ ಜನರಿಗೆ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.
ನೀರನ್ನು ಮತ್ತೊಮ್ಮೆ ಸೃಷ್ಟಿ ಮಾಡಲು ಸಾಧ್ಯವಿಲ್ಲ. ನೀರನ್ನು ಪೋಲು ಮಾಡುವುದು ಅಪರಾಧ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎನ್ನೆಸ್ಸೆಸ್ ಅಧಿಕಾರಿ ವಿನಿತಾ ಕೆ., ಸಂತ ಆಗ್ನೇಸ್ ಕಾಲೇಜು ಪ್ರಾಂಶುಪಾಲೆ ಸುಪ್ರೀಯ, ಕಾಲೇಜಿನ ರಿಜಿಸ್ಟ್ರಾರ್ ಚಾರ್ಲ್ಸ್ ಪೈಸ್, ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಉದಯಕುಮಾರ್, ಅನಿತಾ ಎಸ್ ಉಪಸ್ಥಿತರಿದ್ದರು.