×
Ad

ಕಳವುಗೈದ ಬೈಕ್ ಮಾರಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

Update: 2016-06-25 18:40 IST

ಪುತ್ತೂರು, ಜೂ.25: ಬೈಕನ್ನು ಕಳವುಗೈದು ಮಾರಾಟ ಮಾಡಲೆಂದು ತೆರಳುತ್ತಿದ್ದ ವೇಳೆ ಪುತ್ತೂರು ನಗರ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಪುತ್ತೂರು ನಗರದ ಸಾಮೆತ್ತಡ್ಕ ನಿವಾಸಿ ಕರುಣಾಕರ್ ಅವರ ಪುತ್ರ ಪ್ರಸಾದ್ (23) ಮತ್ತು ಪುತ್ತೂರು ನಗರದ ಹೊರವಲಯದ ಪಡೀಲಿನ ಅಣ್ಣು ನಾಯ್ಕ ಕಾಂಪೌಂಡ್ ನಿವಾಸಿ ವಸಂತ ಅವರ ಪುತ್ರ ಕಾರ್ತಿಕ್ (23) ಆರೋಪಿಗಳು.

ಕಳೆದ ಗುರುವಾರ ನಸುಕಿನ ವೇಳೆ ಪುತ್ತೂರು ನಗರ ಠಾಣೆಯ ಎಸೈ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಪುತ್ತೂರಿನ ಜೈನ ಭವನದ ಬಳಿಯ ರಸ್ತೆಯಾಗಿ ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಪೊಲೀಸರನ್ನು ಕಂಡು ಅಲ್ಲೇ ಬೈಕ್ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದರು. ಪೊಲೀಸರು ಬೆನ್ನಟ್ಟಿ ಅವರಿಬ್ಬರನ್ನು ಹಿಡಿದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದ ವೇಳೆ ಆರೋಪಿಗಳು ಕಳೆದ ಆರು ತಿಂಗಳ ಹಿಂದೆ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಕುಂಜಾರು ದೇವಸ್ಥಾನದ ಬಳಿ ನಿಲ್ಲಿಸಲಾಗಿದ್ದ ಬೈಕೊಂದನ್ನು ಕಳವುಗೈದಿರುವ ವಿಚಾರವನ್ನು ಬಾಯ್ಬಿಟ್ಟಿದ್ದರು. ಅಲ್ಲದೆ ಈ ಬೈಕನ್ನು ತಾವೀಗ ಮಾರಾಟ ಮಾಡಲೆಂದು ಕಾಸರಗೋಡಿಗೆ ಹೊರಟಿರುವುದಾಗಿ ತಿಳಿಸಿದ್ದರು. ಪೊಲೀಸರು ಅವರಿಬ್ಬರ ವಿರುದ್ಧ ಬೈಕ್ ಕಳವಿನ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಇದೀಗ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ಅರಂತನಡ್ಕ ಬಾಲಕೃಷ್ಣ ರೈ, ದುರ್ಗಾಪ್ರಸಾದ್ ರೈ ಕುಂಬ್ರ, ಮಹೇಶ್ ಕಜೆ, ಪ್ರಸಾದ್ ಕುಮಾರ್ ರೈ ವಾದಿಸಿದ್ದರು.

ಕಳವಾದ ಬೈಕ್ 6ತಿಂಗಳ ಬಳಿಕ ಪತ್ತೆ

ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಕುಂಜಾರು ದೇವಸ್ಥಾನದ ಬಳಿ ಹರಿಪ್ರಸಾದ್ ಶೆಟ್ಟಿ ಎಂಬವರು ನಿಲ್ಲಿಸಿದ್ದ ಬೈಕ್ ಕಳೆದ ಜನವರಿ ತಿಂಗಳಿನಲ್ಲಿ ಕಳವಾಗಿತ್ತು. ಬೈಕ್ ಕಳವಾದ ಕುರಿತು ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಗಳ ಬಂಧನದೊಂದಿಗೆ ಈ ಬೈಕ್ ಪತ್ತೆಯಾಗಿದೆ.

ಆರೋಪಿಗಳು ಕಳವುಗೈದಿದ್ದ ಈ ಬೈಕನ್ನು ಪುತ್ತೂರಿನಲ್ಲಿ ಮಾರಾಟ ಮಾಡಲು ಬಹಳಷ್ಟು ಪ್ರಯತ್ನಿಸಿದ್ದರು. ಆದರೆ ಖರೀದಿಸುವವರು ಸಿಗದ ಕಾರಣ ಕಾಸರಗೋಡಿನಲ್ಲಿ ಮಾರಾಟ ಮಾಡುವ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆಗೆ ಬಾಯ್ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News