ರಾಜ್ಯದಲ್ಲಿ ಹದಗೆಟ್ಟ ಆಡಳಿತ ವ್ಯವಸ್ಥೆ: ಕೃಷ್ಣ ಜೆ. ಪಾಲೆಮಾರ್ ಆರೋಪ
ಮಂಗಳೂರು, ಜೂ.25: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾಗಿರುವ ಕಾಂಗ್ರೆಸ್ ಪಕ್ಷದೊಳಗಿನ ಗೊಂದಲದಿಂದ ಆಡಳಿತ ಸಂಪೂರ್ಣ ಹದಗೆಟ್ಟಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಇದರ ಪರಿಣಾಮ ಕಂಡು ಬರುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅವರು ರಾಜ್ಯದಲ್ಲಿ ಇತ್ತೀಚಿನ ಸಚಿವ ಸಂಪುಟದ ವಿಸ್ತರಣೆಯ ಪ್ರಕ್ರಿಯೆ ನಡೆದ ಬಳಿಕ ಸಚಿವರು,ಶಾಸಕರು ತಮ್ಮ ಪಕ್ಷದ ವಿರುದ್ಧ ಕಿತ್ತಾಡುತ್ತಿದ್ದಾರೆ. ಪರಿಣಾಮವಾಗಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕೃತಕ ನೆರೆಯ ವಾತಾವರಣ, ಅಪೂರ್ಣಗೊಂಡ ಕಾಮಗಾರಿಗಳು ಕಂಡು ಬರುತ್ತಿವೆ. ರಾಜ್ಯ ಸರಕಾರದಿಂದ ಸಕಾಲದಲ್ಲಿ ಬಿಡುಗಡೆಯಾಗಬೇಕಾದ ಹಣ ಬಿಡುಗಡೆಯಾಗದೆ ಸಮಸ್ಯೆ ಸೃಷ್ಟಿಯಾಗಿದೆ .ಇದರಿಂದ ರಾಜ್ಯದ ಜನತೆ ನಿರಾಸೆ ಗೊಂಡಿದ್ದಾರೆ.
ಸಾಂಕ್ರಾಮಿಕ ರೋಗಗಳಾದ ಡೆಂಗ್, ಮಲೇರಿಯಾ ರಾಜ್ಯದ ಜನತೆಯನ್ನು ಕಾಡುತ್ತಿದೆ. ಈ ಬಗ್ಗೆ ಸರಕಾರದಿಂದ ತುರ್ತು ಕ್ರಮ ಕೈ ಗೊಳ್ಳುತ್ತಿರುವ ಯಾವ ಕಾರ್ಯಕ್ರಮಗಳು ನಡೆಯುತ್ತಿಲ್ಲ .ರಾಜ್ಯದ ಮುಖ್ಯಮಂತ್ರಿಗಳಿಗೂ ತಮ್ಮ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಮಾತ್ರ ಚಿಂತೆ ಇರುವಂತೆ ಕಾಣುತ್ತಿದೆ. ಸರಕಾರ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂದು ಪಾಲೆಮಾರ್ ಆರೋಪಿಸಿದರು.