ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಸಮಾಜ ಜಾಗೃತವಾಗಬೇಕು: ಪ್ರೊ.ಹಿಲ್ಡಾ ರಾಯಪ್ಪನ್
ಬಂಟ್ವಾಳ, ಜೂ.25: ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತಾಗಿ ನಾಗರಿಕ ಸಮಾಜ ಜಾಗೃತವಾಗಬೇಕು. ಪೊಕ್ಸೊದಂತಹ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಮಂಗಳೂರು ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಹೇಳಿದರು.
ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರದ ಹೆಣ್ಣು ಮಕ್ಕಳ ಸಂರಕ್ಷಣಾ ಹಕ್ಕುಗಳನ್ನು ಬಲಪಡಿಸುವ ಯೋಜನೆಯ ವತಿಯಿಂದ ಅಧ್ಯಾಪಕ ಒಕ್ಕೂಟದ ಸದಸ್ಯರು, ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಯುವಕ ಸಂಘದ ಆಶ್ರಯದಲ್ಲಿ ಶನಿವಾರ ಬಿ.ಸಿ.ರೋಡಿನ ಎಸ್‌ಜೆಎಸ್‌ಆರ್‌ವೈ ಸಭಾಂಗಣದಲ್ಲಿ ನಡೆದ ಲಿಂಗಾಧಾರಿತ ತಾರತಮ್ಯ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕವಾಗಿ ಮಹಿಳೆಯರು ಮುನ್ನಡೆಯಬೇಕೆನ್ನುವ ಆಶಯವಿದ್ದರೂ ಅವರ ಮುನ್ನಡೆಗೆ ಲಿಂಗಾಧಾರಿತ ತಾರತಮ್ಯ ಅಡ್ಡಿಯಾಗುತ್ತಿದ್ದು, ಈ ಬಗ್ಗೆ ಜಾಗೃತಿ ಅಗತ್ಯ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಗಾರವನ್ನು ಉದ್ಘಾಟಿಸಿದರು. ಹೆಣ್ಣು ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಇರುವಂತಹ ಕಾನೂನುಗಳ ಕುರಿತಾಗಿ ಮಹಿಳೆಯರಿಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದರು.
ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ಅಧ್ಯಾಪಕಿ ಮಾರ್ಗರೇಟ್ ಪಿಂಟೋ ಮಹಿಳಾ ದೌರ್ಜನ್ಯದ ಕುರಿತಾಗಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಅಧ್ಯಾಪಕರ ಸಂಘದ ಅಧ್ಯಕ್ಷ ರಮೇಶ್ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ, ಪುರಸಭಾ ಸಮುದಾಯ ಅಧಿಕಾರಿ ಮತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೌನೇಶ ವಿಶ್ವಕರ್ಮ, ಮಕ್ಕಳ ಹಕ್ಕು, ಕಡ್ಡಾಯ ಶಿಕ್ಷಣ ಕಾಯ್ದೆ, ಲಿಂಗ ತಾರತಮ್ಯ, ಪೊಕ್ಸೊ ಕಾಯ್ದೆಯ ಕುರಿತಾಗಿ ಕಾರ್ಯಾಗಾರ ನಡೆಸಿಕೊಟ್ಟರು. ಯೋಜನೆಯ ಸಂಯೋಜಕಿ ಲಲಿತಾ ಶೆಟ್ಟಿ ಸ್ವಾಗತಿಸಿದರು. ಡೆನ್ನಿಸ್ ಡಿಸೋಜ ವಂದಿಸಿದರು. ವಿಶಾಲಾಕ್ಷಿ, ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.