ವರ್ಷದ ಕೊನೆಗೆ ಭಾರತಕ್ಕೆ ಎನ್‌ಎಸ್‌ಜಿ ಸದಸ್ಯನಾಗುವ ಅವಕಾಶ: ಅಮೆರಿಕ ವಿಶ್ವಾಸ
ವಾಶಿಂಗ್ಟನ್, ಜೂ. 25: ಈ ವರ್ಷದ ಕೊನೆಯ ವೇಳೆಗೆ ಭಾರತಕ್ಕೆ ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ನ ಪೂರ್ಣ ಸದಸ್ಯನಾಗುವ ಅವಕಾಶವಿದೆ ಎಂದು ಅಮೆರಿಕ ಇಂದು ಹೇಳಿದೆ.
ಸಿಯೋಲ್‌ನಲ್ಲಿ ಗುರುವಾರ ನಡೆದ 48 ಸದಸ್ಯರ ಗುಂಪಿನ ಪೂರ್ಣಾಧಿವೇಶನ ಭಾರತವನ್ನು ಗುಂಪಿಗೆ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದೆ ಮುಕ್ತಾಯಗೊಂಡ ಬಳಿಕ ಅಮೆರಿಕ ಈ ಹೊಸ ಭರವಸೆಯನ್ನು ನೀಡಿದೆ.
ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವುದನ್ನು ಚೀನಾದ ನೇತೃತ್ವದಲ್ಲಿ ಹಲವು ದೇಶಗಳು ವಿರೋಧಿಸಿದ್ದವು.
''ವರ್ಷದ ಕೊನೆಯ ವೇಳೆಗೆ ಈ ನಿಟ್ಟಿನಲ್ಲಿ ಮುನ್ನಡಿಯಿಡಲು ಅವಕಾಶವಿದೆ ಎಂಬ ಬಗ್ಗೆ ನಮಗೆ ವಿಶ್ವಾಸವಿದೆ'' ಎಂದು ಒಬಾಮ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
''ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಆದರೆ, ವರ್ಷಾಂತ್ಯದ ವೇಳೆಗೆ ಭಾರತ ಎನ್‌ಎಸ್‌ಜಿಯ ಪೂರ್ಣ ಸದಸ್ಯನಾಗುತ್ತದೆ ಎಂಬ ಬಗ್ಗೆ ನಮಗೆ ಭರವಸೆಯಿದೆ'' ಎಂದರು.
ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ದೊರೆಯಬೇಕು ಎಂಬ ವಿಷಯದಲ್ಲಿ ಅಮೆರಿಕ ದೃಢವಾಗಿದೆ ಎಂದು ಹೇಳಿದ ಅಧಿಕಾರಿ, ಈ ವಿಷಯಗಳಲ್ಲಿ ಒಬಾಮ ಆಡಳಿತ ಹೊಸದಿಲ್ಲಿ ಮತ್ತು ಇತರ ದೇಶಗಳೊಡನೆ ನಿಕಟ ಸಂಪರ್ಕ ಹೊಂದಿದೆ ಎಂದರು.
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್)ಯೊಳಗೆ ನಡೆದ ಫಲಪ್ರದ ಮಾತುಕತೆಗಳನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಈ ಗುಂಪಿನ ಸದಸ್ಯ ದೇಶಗಳ ನಡುವೆ ಹಲವು ತಿಂಗಳುಗಳ ಮಾತುಕತೆಯ ಬಳಿಕ ಈ ತಿಂಗಳ ಆರಂಭದಲ್ಲಿ ಭಾರತವನ್ನು ಎಂಟಿಸಿಆರ್‌ಗೆ ಸೇರ್ಪಡೆಗೊಳಿಸಲಾಗಿದೆ.