×
Ad

ಗಾಂಜಾ ಮಾರಾಟಗಾರನ ಬಂಧನ: ಆಟೋರಿಕ್ಷಾ ಸಹಿತ ಗಾಂಜಾ ವಶ

Update: 2016-06-25 23:07 IST

ಮಂಗಳೂರು, ಜೂ. 25: ಗಾಂಜಾ ಸಾಗಿಸುತ್ತಿದ್ದ ವಾಹನ ಸಹಿತ ಆರೋಪಿಯೋರ್ವನನ್ನು ವಿಟ್ಲ ಠಾಣಾ ಪೊಲೀಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಟ್ಲ ಠಾಣಾ ಪಿಎಸೈ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ವರ್ಗ ಗಾಂಜಾ ಮಾರಾಟ ಹಾಗೂ ಸಾಗಾಟದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಸಾಲೆತ್ತೂರಿನ ಕಟ್ಟತ್ತಿಲ ಪಾಲ್ತಾಜೆ ನಿವಾಸಿ ಜಲಾಲುದ್ದೀನ್ (30) ಎಂಬಾತನನ್ನು ಕೇರಳ ಗಡಿ ಭಾಗದ ಸಾಲೆತ್ತೂರಿನ ಕಟ್ಟತ್ತಿಲ ಎಂಬಲ್ಲಿಂದ ಬಂಧಿಸಿದ್ದಾರೆ.

ಕೇರಳ ರಾಜ್ಯದ ಉಪ್ಪಳದಿಂದ ಸಾಲೆತ್ತೂರು ಕಡೆಗೆ ಒಂದು ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟವಾಗುತ್ತಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದರು. ಅದರಂತೆ ಪೊಲೀಸರು ಆರೋಪಿಯ ಸಾಗಾಟದ ವಾಹನದ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ಸುಮಾರು 7,000 ಬೆಲೆ ಬಾಳುವ 850 ಗ್ರಾಂ ಗಾಂಜಾ ಹಾಗೂ ಸುಮಾರು 1,50,000 ರೂ. ಮೌಲ್ಯದ ಆಟೊರಿಕ್ಷಾವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಕೆಲವು ಸಮಯದಿಂದ ಕೇರಳದ ಉಪ್ಪಳದಿಂದ ಗಾಂಜಾವನ್ನು ಖರೀದಿಸಿ ಸಾಲೆತ್ತೂರು, ಕುಡ್ತಮುಗೇರು, ಮಾದಕಟ್ಟೆ, ಬೋಳಂತೂರು ಪರಿಸರದಲ್ಲಿ ಯುವಕರಿಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಾಗೂ ಸೊತ್ತು ಪತ್ತೆ ಕಾರ್ಯಾಚರಣೆಯಲ್ಲಿ ಬಂಟ್ವಾಳ ವೃತ್ತ ಸಿಪಿಐ ಕೆ.ಯು.ಬೆಳ್ಳಿಯಪ್ಪ, ವಿಟ್ಲ ಪಿಎಸೈ ಪ್ರಕಾಶ್ ದೇವಾಡಿಗ, ಎಎಸೈಸ ಆನಂದ ಪೂಜಾರಿ, ಬಾಲಕೃಷ್ಣ, ಜಿನ್ನಪ್ಪ ಗೌಡ, ಜಯಕುಮಾರ್, ಪ್ರವೀಣ್ ರೈ, ರಕ್ಷಿತ್ ರೈ, ಪ್ರವೀಣ್ ಕುಮಾರ್, ರಮೇಶ್ ಮತ್ತು ರಘುರಾಮ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News