ಮ್ಯಾನ್ಮಾರ್: ಮಸೀದಿ ಧ್ವಂಸ ಮಾಡಿದ ಬೌದ್ಧ ಗುಂಪು, ಉದ್ವಿಗ್ನತೆ
ಯಾನ್‌ಗಾನ್: ಮ್ಯಾನ್ಮರ್ ನ ಮಧ್ಯಪ್ರಾಂತದಲ್ಲಿ ಶನಿವಾರ ಬೌದ್ಧ ಗುಂಪೊಂದು ಮಸೀದಿಯನ್ನು ಧ್ವಂಸ ಮಾಡಿದ ಮೇಲೆ ಧಾರ್ಮಿಕ ಸಂಘರ್ಷ ಏರ್ಪಟ್ಟಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ದಾಳಿಯಲ್ಲಿ ಮ್ಯಾನ್ಮರ್ ನ ಯಾನ್‌ಗಾಂವ್ ಹೊರವಲಯದ ಮಸೀದಿಯ ಒಳಭಾಗವನ್ನು ನಾಶಪಡಿಸಲಾಗಿದೆ. ಮ್ಯಾನ್ಮರ್ ನಲ್ಲಿ ಮುಸ್ಲಿಂ ವಿರೋಧಿ ದ್ವೇಷದ ಇತ್ತೀಚಿಗಿನ ಕಿಚ್ಚು ಇದು. 2012ರಿಂದ ಇಲ್ಲಿ ಧಾರ್ಮಿಕ ರಕ್ತಪಾತಗಳು ಸಾಮಾನ್ಯವೆನಿಸುವಷ್ಟು ಹೆಚ್ಚಾಗಿವೆ. ಕ್ಷಿಪ್ರವಾಗಿ ಜನಪ್ರಿಯವಾಗುತ್ತಿರುವ ಬೌದ್ಧಮತೀಯ ರಾಷ್ಟ್ರೀಯವಾದವು ಆಂಗ್ ಸಾನ್ ಸೂಕಿ ಸರಕಾರಕ್ಕೆ ನಿರ್ಣಾಯಕ ಸವಾಲಾಗಿದೆ. ಇತ್ತೀಚಿಗಿನ ಮತ್ತೊಂದು ಗಲಭೆ ಇದೇ ವಾರದಲ್ಲಿ ನಡೆದಿದ್ದು, ಬಾಗೋ ಪ್ರಾಂತದ ಗ್ರಾಮವೊಂದರ ಮುಸ್ಲಿಂ ಪ್ರಾಂತದಲ್ಲಿ ಮುಸ್ಲಿಂ ಶಾಲೆಯೊಂದನ್ನು ನಿರ್ಮಿಸುವ ಕುರಿತಂತೆ ನೆರೆಹೊರೆಯವರಲ್ಲಿ ವಾದ ವಿವಾದವಾದ ಹಿನ್ನೆಲೆಯಲ್ಲಿ ಸುಮಾರು 200 ಬೌದ್ಧಮತೀಯರು ದಾಳಿ ಮಾಡಿದ್ದರು. ಶನಿವಾರವೂ ಪರಿಸ್ಥಿತಿ ಗಂಭೀರವಾಗಿದ್ದು 100 ಪೊಲೀಸ್ ಅಧಿಕಾರಿಗಳನ್ನು ಶಾಂತಿ ಕಾಪಾಡಲು ನಿಯೋಜಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಓವನ್ ಲ್ವಿನ್ ಹೇಳಿದ್ದಾರೆ. ಕಳೆದ ರಾತ್ರಿ ಗಲಭೆಯಾಗುವ ಸಾಧ್ಯತೆಯಿದೆ ಎಂದು ಊಹಾಪೋಹಗಳಿದ್ದ ಕಾರಣ 50 ಪೊಲೀಸರು ಗ್ರಾಮಕ್ಕೆ ಪಹರೆ ನೀಡಿದ್ದರು. ಈಗ 100 ಅಧಿಕಾರಿಗಳ ಪಡೆಯನ್ನು ನಿಯೋಜಿಸಿದ್ದೇವೆ ಎಂದು ಲ್ವಿನ್ ಹೇಳಿದ್ದಾರೆ.
ಗ್ರಾಮದ ಮುಸ್ಲಿಂ ನಿವಾಸಿಗಳು ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಭಯ ನಿವಾರಣೆಯಾಗುವವರೆಗೂ ನೆರೆಯ ಪಟ್ಟಣಕ್ಕೆ ಹೋಗಲು ಯೋಚಿಸಿದ್ದಾರೆ ಎಂದು ಮಸೀದಿಯ ಕಾರ್ಯದರ್ಶಿ ವಿನ್ ಶ್ವೆ ಹೇಳಿದ್ದಾರೆ. ನಮ್ಮ ಪರಿಸ್ಥಿತಿ ಸುರಕ್ಷಿತವಾಗಿಲ್ಲ ಮತ್ತು ಗ್ರಾಮ ಬಿಡುವ ಬಗ್ಗೆ ಯೋಚಿಸುತ್ತಿದ್ದೇವೆ. ಭಯದ ವಾತಾವರಣವಿದೆ ಎಂದು ಶ್ವೆ ಹೇಳಿದರು. ಇತ್ತೀಚಿಗಿನ ವರ್ಷಗಳಲ್ಲಿ ಮ್ಯಾನ್ಮರ್ ನಲ್ಲಿ ಮುಸ್ಲಿಂ ವಿರೋಧಿ ಭಾವನೆ ತೀರ್ವವಾಗಿದೆ. 2011ರಲ್ಲಿ ಹಿಂದಿನ ಸರ್ಕಾರ ಕೆಳಗಿಳಿದ ಮೇಲೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬೆದರಿಕೆ ಒಡ್ಡುವ ಹಲವು ಹಿಂಸೆಗಳು ಇಲ್ಲಿ ನಡೆದಿವೆ. ಅತೀ ಬರ್ಬರ ಧಾರ್ಮಿಕ ಹಿಂಸೆಯು ಮ್ಯಾನ್ಮರ್ ಮಧ್ಯಪ್ರಾಂತದಲ್ಲಿ ಮತ್ತು ಪಶ್ಚಿಮ ಭಾಗದ ರಾಖೀನ್ ರಾಜ್ಯದಲ್ಲಿ ನಡೆದಿದೆ. ಇಲ್ಲಿನ ಗಲಭೆಯ ನಂತರ ರೊಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರು ಸಾವಿರಾರು ಸಂಖ್ಯೆಯಲ್ಲಿ ಈಗಲೂ ಸಂತ್ರಸ್ತ ಶಿಬಿರಗಳಲ್ಲಿ ನೆಲೆಸಿದ್ದಾರೆ.
ಉಗ್ರಪಂಥೀಯ ಸನ್ಯಾಸಿಗಳು ಮತ್ತು ಬೌದ್ಧಮತೀಯ ರಾಷ್ಟ್ರೀಯವಾದಿಗಳು ರೊಹಿಂಗ್ಯಾ ಸಮುದಾಯಕ್ಕೆ ಅಧಿಕೃತ ಅಲ್ಪಸಂಖ್ಯಾತ ಗುರುತು ನೀಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅವರನ್ನು ಬಂಗಾಳಿಗಳು ಎಂದು ಕರೆದು, ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಎಂದು ಅವರು ಹೇಳುತ್ತಿದ್ದಾರೆ. ಮಾನವೀಯ ಹಕ್ಕುಗಳ ಬಗ್ಗೆ ಬಹಿರಂಗವಾಗಿಯೇ ವಾದಿಸುವ ಸೂ ಕಿ ರೊಹಿಂಗ್ಯಾ ಕುರಿತ ಅವರ ನಿಲುವಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಈ ತಿಂಗಳಲ್ಲಿ ವಿಶ್ವಸಂಸ್ಥೆ ಕೂಡ ದೇಶಕ್ಕೆ ಎಚ್ಚರಿಕೆ ನೀಡಿದ್ದು, ಒಂದು ಪಂಗಡದ ವಿರುದ್ಧದ ಹಿಂಸೆ ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹೇಳಿದೆ. ದಶಕಗಳ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಸೂ ಕಿ ಈಗ ಮ್ಯಾನ್ಮರ್ ನ ಮೊದಲ ನಾಗರಿಕ ಸರ್ಕಾರದ ಆಡಳಿತವಹಿಸಿಕೊಂಡಿರುವ ಕಾರಣ ಧಾರ್ಮಿಕ ಸಮುದಾಯಗಳ ನಡುವೆ ನಂಬಿಕೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ.