ವಿಕಾಸ್ ಕಾಲೇಜಿನಲ್ಲಿ ವಿಶ್ವ ಮಾದಕದ್ರವ್ಯ ವಿರೋಧಿ ದಿನಾಚರಣೆ
ಮಂಗಳೂರು, ಜೂ.25: ಸಮಾಜದ ವಿವಿಧ ಸ್ತರಗಳ ಜನರು ಮಾದಕ ವ್ಯಸನ ತಡೆಗಟ್ಟುವಿಕೆಯನ್ನು ಸಾಮಾಜಿಕ ಹೊಣೆಗಾರಿಕೆಯೆಂದು ಭಾವಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾದಾಗ ಯಶಸ್ಸು ಗಳಿಸಬಹುದು ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ಡಾ.ಸಂಜೀವ ಎಂ.ಪಾಟೀಲ್ ತಿಳಿಸಿದರು.
ಇಂದು ನಗರದ ವಿಕಾಸ್ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವತಿಯಿಂದ ಹಮ್ಮಿಕೊಂಡ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾ ಡಿದರು.
ಮಾಜಿ ಸಚಿವ ಹಾಗೂ ವಿಕಾಸ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ, ಮಾದಕವ್ಯಸನದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ಇಂದಿನ ಅಗತ್ಯ. ನಮ್ಮ ಕುಟುಂಬದ ಸದಸ್ಯರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯುವುದರ ಜೊತೆಗೆ ಇತರರು ಕೂಡ ಈ ಚಟಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಯೆನೆಪೊಯ ವಿಶ್ವ ವಿದ್ಯಾನಿಲಯದ ಪ್ರೊ.ಡಾ.ಸುಧೀಂದ್ರ ಪ್ರಭು ಮಾತನಾಡಿ, ಮಾದಕ ದ್ರವ್ಯ ಸೇವನೆಯ ಚಟ ಹೆಚ್ಚಾಗದಂತೆ ತಡೆಯಲು ಪರ್ಯಾಯವಾಗಿ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಕಾಸ ಕಾಲೇಜಿನ ಸಲಹೆಗಾರ ಅನಂತ ಪ್ರಭು, ಪ್ರಾಂಶುಪಾಲ ಡಾ.ವೆಂಕಟ್ ರಾಯುಡು, ಉಪ ಪ್ರಾಂಶುಪಾಲೆ ಮೋಹನಾ ಆರ್. ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಸನಿಲ್ ಸ್ವಾಗತಿಸಿದರು. ವೈಶಾಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ಫರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಬಗ್ಗೆ ಮೈಮ್ ಶೋ ನೀಡಿದರು.