ಹೇಲ್ಸ್ - ರಾಯ್ ಶ್ರೇಷ್ಠ ಆಟ; ಇಂಗ್ಲೆಂಡ್‌ಗೆ ಜಯ

Update: 2016-06-25 18:46 GMT

ಬರ್ಮಿಂಗ್‌ಹ್ಯಾಂ, ಜೂ.25: ಇಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯ ಎರಡನೆ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಅಲೆಕ್ಸ್ ಹೇಲ್ಸ್ ಮತ್ತು ಜಾಸನ್ ರಾಯ್ ಔಟಾಗದೆ ದಾಖಲಿಸಿದ 256 ರನ್‌ಗಳ ನೆರವಿನಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಅಲೆಕ್ಸ್ ಮೊದಲ ವಿಕೆಟ್‌ಗೆ ಔಟಾಗದೆ 133 ರನ್ ಮತ್ತು ಜಾಸನ್ ಔಟಾಗದೆ 112 ರನ್ ಗಳಿಸಿದರು.
255 ರನ್ ಮಾಡಬೇಕಿದ್ದ ಇಂಗ್ಲೆಂಡ್ ತಂಡ ಬಹಳ ಸುಲಭವಾಗಿ ಗೆಲುವಿನ ದಡ ಸೇರಿತು.
 ಮೊದಲ ಪಂದ್ಯ ರಾಯ್ ಮತ್ತು ಅಲೆಕ್ಸ್(112) ಪ್ರಯತ್ನದ ಫಲವಾಗಿ ಪಂದ್ಯ ಟೈ ಆಗಿತ್ತು.
    ಎರಡನೆ ಪಂದ್ಯದಲ್ಲಿ ಜಯ ಗಳಿಸಿದ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು. ಮೊದಲ ವಿಕೆಟ್‌ಗೆ 256 ರನ್‌ಗಳ ಜೊತೆಯಾಟ ನೀಡಿರುವುದು ಐತಿಹಾಸಿಕ ಸಾಧನೆಯಾಗಿದೆ. ಇಂಗ್ಲೆಂಡ್ ಹಿಂದಿನ ಪಂದ್ಯಗಳಲ್ಲಿ ಆರು ಬಾರಿ 250ಕ್ಕೂ ಹೆಚ್ಚು ಸ್ಕೋರ್ ದಾಖಲಿತ್ತು. ಹೇಲ್ಸ್ 1000 ರನ್‌ಗಳನ್ನು ಪೂರೈಸಿದ 34ನೆ ಆಟಗಾರ ಎನಿಸಿಕೊಂಡರು. ಹೇಲ್ಸ್ ಮೂರನೆ ಶತಕ ದಾಖಲಿಸಿದರು. ಹೇಲ್ಸ್ 29ನೆ ಓವರ್‌ನಲ್ಲಿ ಪ್ರಸನ್ನ ಅವರ 5 ಎಸೆತಗಳಲ್ಲಿ 26 ರನ್ ಪೂರ್ಣಗೊಳಿಸಿದರು. ಸತತ ಎರಡು ಬಾರಿ ಚೆಂಡನ್ನು ಬೌಂಡರಿಗಟ್ಟಿದರು. ಪ್ರಸ್ತುತ ಸಾಲಿನಲ್ಲಿ 500ಕ್ಕಿಂತ ಹೆಚ್ಚು ರನ್ ದಾಖಲಿಸಿದ ಮೂರನೆ ಆಟಗಾರ ಎನಿಸಿಕೊಂಡರು.
ಆಸ್ಟ್ರೇಲಿಯದ ಸ್ಟೀವ್ ಸ್ಮಿತ್(574), ಡೇವಿಡ್ ವಾರ್ನರ್(511) ಈ ಸಾಧನೆ ಮಾಡಿರುವ ಇತರ ಆಟಗಾರರು.
  ರಾಯ್ ಎರಡು ಬಾರಿ ರನೌಟಾಗುವ ಅವಕಾಶ ಕಳೆದುಕೊಂಡಿದ್ದರು. ಪ್ರಸನ್ನ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಶತಕ ಪೂರ್ಣಗೊಳಿಸಿದರು. 35ನೆ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಗೆಲುವಿನ ರನ್ ಬಾರಿಸಿದರು.
 ಇದಕ್ಕೂ ಮೊದಲು ದಿನೇಶ್ ಚಾಂಡಿಮಾಲ್ ಮತ್ತು ಉಪುಲ್ ತರಂಗ ದಾಖಲಿಸಿದ ಅರ್ಧಶತಕಗಳ ಸಹಾಯದಿಂದ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 254 ರನ್ ಗಳಿಸಿತ್ತು.
ಶ್ರೀಲಂಕಾದ ತಂಡದ ಅಗ್ರ ಸರದಿ ವೈಫಲ್ಯದ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ಸವಾಲು ಸೇರಿಸಲು ಸಾಧ್ಯವಾಗಲಿಲ್ಲ.
 ಲಿಯಾಮ್ ಪ್ಲೆಂಕೆಟ್ ಮತ್ತು ಆದಿಲ್ ರಶೀದ್ ತಲಾ ಎರಡು ವಿಕೆಟ್ ಪಡೆದರು. ಧನುಶ್ಕ ಗುಣತಿಲಕೆ ಅವರು ಡೇವಿಡ್ ವಿಲ್ಲಿ ಅವರ ಐದನೆ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿದ್ದರು. ಗುಣತಿಲಕೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 22 ರನ್ ಗಳಿಸಿದರು. ಕುಸಾಲ್ ಮೆಂಡಿಸ್ 9 ಎಸೆತಗಳನ್ನು ಎದುರಿಸಿದರೂ ಅವರಿಂದ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
  ಚಾಂಡಿಮಾಲ್ ಮತ್ತು ಕುಶಲ್ ಪೆರೆರಾ (37) ಅವರು 30 ರನ್‌ಗಳ ಜೊತೆಯಾಟ ನೀಡಿದರು. ಸ್ಕೋರ್ ಬೋರ್ಡ್‌ನಲ್ಲಿ 77 ರನ್ ದಾಖಲಾಗುವಷ್ಟರಲ್ಲಿ 3 ವಿಕೆಟ್ ಪತನಗೊಂಡಿತ್ತು.
ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು ಉಪನಾಯಕ ಚಾಂಡಿಮಾಲ್ ನಾಲ್ಕನೆ ಬಾರಿ 50ಕ್ಕೂ ಅಧಿಕ ರನ್‌ಗಳ ಜೊತೆಯಾಟ ನೀಡಿದರು. ತರಂಗ 29ನೆ ಅರ್ಧಶತಕ ದಾಖಲಿಸಿದರು.
 ಆದಿಲ್ ರಶೀದ್ 34ಕ್ಕೆ 2 ಮತ್ತು ಪ್ಲೆಂಕೆಟ್ 49ಕ್ಕೆ 2 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 50 ಓವರ್‌ಗಳಲ್ಲಿ 254/7( ತರಂಗ ಔಟಾಗದೆ 53, ಚಾಂಡಿಮಲ್ 52; ರಶೀದ್ 34ಕ್ಕೆ 2, ಪ್ಲೆಂಕೆಟ್ 49ಕ್ಕೆ 2).
ಇಂಗ್ಲೆಂಡ್ 34.1 ಓವರ್‌ಗಳಲ್ಲಿ 256/0(ಅಲೆಕ್ಸ್ ಹೇಲ್ಸ್ ಔಟಾಗದೆ 133 , ರಾಯ್ ಔಟಾಗದೆ 112).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News