×
Ad

ಟಿಕೆಟ್ ಇಲ್ಲದ ತಪ್ಪಿಗೆ ಚಲಿಸುವ ರೈಲಿನಿಂದ ಬಾಲಕನನ್ನು ಹೊರ ದೂಡಿದ ಟಿಟಿಇ

Update: 2016-06-26 08:58 IST

ಭುವನೇಶ್ವರ, ಜೂ.26: ಟಿಕೆಟ್ ಇಲ್ಲದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 15 ವರ್ಷದ ಬಾಲಕನೊಬ್ಬನನ್ನು ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ರೈಲಿನಿಂದ ಹೊರದಬ್ಬಿದ ಅಮಾನವೀಯ ಘಟನೆ ನಡೆದಿದೆ. ಬಾಲಕ ತೀವ್ರ ಗಾಯಗೊಂಡಿದ್ದಾನೆ.

ಚೆನ್ನೈ- ಹೌರಾ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ. ವಿಶಾಖಪಟ್ಟಣಂನಲ್ಲಿ ರೈಲು ಏರಿದ ಪಿ.ಕೃಷ್ಣ ಎಂಬ ಈ ಬಾಲಕ ಕಟಕ್‌ಗೆ ಹೋಗುತ್ತಿದ್ದ. ಕಾಯ್ದಿರಿಸಿದ ಎಸ್-10 ಬೋಗಿಗೆ ಟಿಕೆಟ್ ಇಲ್ಲದೆ ಹತ್ತಿದ್ದ ಎನ್ನಲಾಗಿದೆ. ಟಿಟಿಇ ಟಿಕೆಟ್ ತಪಾಸಣೆಗೆ ಬಂದಾಗ ಬಾಲಕನಲ್ಲಿ ಟಿಕೆಟ್ ಇರಲಿಲ್ಲ.

"ನಾನು ಬೋಗಿಯ ಬಾಗಿಲ ಬಳಿ ನಿಂತಿದ್ದೆ. ಟಿಕೆಟ್ ಇಲ್ಲ ಎಂದು ಹೇಳಿದಾಗ ಕೋಪಗೊಂಡ ಟಿಟಿಇ ನನ್ನ ಬಳಿಗೆ ಬಂದು ರೈಲಿನಿಂದ ತಳ್ಳಿದರು" ಎಂದು ಕೃಷ್ಣ ದೂರುತ್ತಾನೆ. ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಎಫ್) ಹಾಗೂ ರೈಲ್ವೆ ಭದ್ರತಾ ಪಡೆ (ಆರ್‌ಪಿಎಫ್) ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬಾಲಕನಿಗೆ ಭುವನೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಕರ್ತವ್ಯದಲ್ಲಿದ್ದ ಟಿಟಿಇಯನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಬಾಲಕನ ಪೋಷಕರಿಗೂ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News