ಮೋದಿ ಶ್ರೇಷ್ಠ ಪ್ರಧಾನಿ ಎಂದು ಯುನೆಸ್ಕೊ ಘೋಷಣೆ ಎಂಬ ಜೋಕು ಮತ್ತು ಬೇಸ್ತು ಬಿದ್ದ ನೆಟ್ಟಿಗರು
ಹೊಸದಿಲ್ಲಿ,ಜೂ.26: ಮೋದಿ ಶ್ರೇಷ್ಠ ಪ್ರಧಾನಿ ಎಂದು ಯುನೆಸ್ಕೊ ಘೋಷಣೆ ಎಂಬ ಅಂತರ್ಜಾಲ ವದಂತಿಯಿಂದ ಸಾವಿರಾರು ಮಂದಿ ನೆಟ್‌ಪ್ರಿಯರು ಬೇಸ್ತು ಬಿದ್ದ ಸ್ವಾರಸ್ಯಕರ ಪ್ರಕರಣ ವರದಿಯಾಗಿದೆ. ಹೀಗೆ ವದಂತಿ ನಂಬಿ ಮೋಸ ಹೋದವರಲ್ಲಿ ಬಿಲಿಯರ್ಡ್ಸ್ ವಿಶ್ವಚಾಂಪಿಯನ್ ಪಂಕಜ್ ಅಡ್ವಾಣಿ ಕೂಡಾ ಸೇರಿದ್ದಾರೆ.
ವಾಟ್ಸ್ ಆಪ್ ಹಾಗೂ ಟ್ವಿಟ್ಟರ್‌ನಲ್ಲೂ ಇದು ವೈರಸ್‌ನಂತೆ ಹರಿದಾಡಿತು. ಗುರುವಾರದಿಂದ ನೆಟ್ ಸಂಚಲನಕ್ಕೆ ಕಾರಣವಾಗಿದ್ದ ಈ ವದಂತಿ ಕೊನೆಗೂ ಶುಕ್ರವಾರ ಸಂಜೆ ಮುಖವಾಡ ಕಳಚಿಕೊಂಡಿತು. 2.4 ಲಕ್ಷ ಟ್ವಿಟ್ಟರ್ ಅಭಿಮಾನಿಗಳನ್ನು ಹೊಂದಿರುವ ಪಂಕಜ್ ಅಡ್ವಾಣಿ, "ಪ್ರಧಾನಿಗೆ ಅಭಿನಂದನೆಗಳು. ಮೋದಿ ಶ್ರೇಷ್ಠ ಪ್ರಧಾನಿ ಎಂದು ಯುನೆಸ್ಕೊ ಘೋಷಣೆ ಮಾಡಿದೆ" ಎಂದು ಟ್ವೀಟ್ ಮಾಡಿದ್ದರು. ಆದರೆ ಸ್ವಲ್ಪ ಸಮಯದ ನಂತರ ಈ ಮಾಹಿತಿ ತಪ್ಪು ಎನ್ನುವುದು ನನಗೆ ತಿಳಿದುಬಂತು ಎಂದು ಪೋಸ್ಟ್ ಮಾಡಿದರು.
ಆದರೆ ಈ ವೇಳೆಗೆ ಈ ಜೋಕ್ ಎಲ್ಲೆಡೆ ಹಬ್ಬಿತ್ತು. "ನಮ್ಮ ಪ್ರಧಾನಿ ಮೋದಿಯರವನ್ನು ಯುನೆಸ್ಕೊ ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಕೆಲ ನಿಮಿಷ ಹಿಂದೆ ಘೋಷಿಸಿದೆ. ಭಾರತೀಯ ಎನಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಇದನ್ನು ದಯವಿಟ್ಟು ಷೇರ್ ಮಾಡಿ" ಎಂಬ ಮಾಹಿತಿ ಹರಿದಾಡುತ್ತಿದೆ. ಮೊದಲಿಗೆ ಈ ಪೋಸ್ಟ್ ಮಾಡಿದವರ ಪೈಕಿ ಮನುವೇಂದ್ರವರ್ಮ7 ಎಂಬ ಖಾತೆಯವರು ಒಬ್ಬರು.