ಶಾಲಾ ವಾಹನಗಳ ತಪಾಸಣೆಯನ್ನು ಪೊಲೀಸ್ ಪ್ರತಿನಿತ್ಯ ನಡೆಸುವಂತೆ ಆಗ್ರಹ
ಮಂಗಳೂರು, ಜೂ.25: ಇತ್ತೀಚೆಗೆ ಕುಂದಾಪುರದ ತ್ರಾಸಿಯಲ್ಲಿ ನಡೆದ ಭೀಕರ ಅಪಘಾತದ ನಂತರ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ವಾಹನಗಳ ತಪಾಸಣೆಯನ್ನು ಪೊಲೀಸ್ ಇಲಾಖೆಯು ಒಂದು ತಿಂಗಳಿಗೆ ಸೀಮಿತಗೊಳಿಸದೆ ಪ್ರತಿನಿತ್ಯವು ನಡೆಸಬೇಕು ಎಂದು ಇಂದು ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು ಮತ್ತು ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ದಲಿತ ಕುಂದುಕೊರತೆ ಸಭೆಯಲ್ಲಿ ಆಗ್ರಹ ಕೇಳಿಬಂತು.
ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ರಘುರಾಜ್ ಅವರು ದಲಿತ ಸಮುದಾಯದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮನೆಯಲ್ಲಿ ಇಲ್ಲದೆ ಇರುವುದರಿಂದ ಅನಿವಾರ್ಯವಾಗಿ ಶಾಲಾ ವಾಹನವನ್ನು ಬಳಸಬೇಕಾಗುತ್ತದೆ. ಈ ಕಾರಣದಿಂದ ಮುಂದೆ ಕುಂದಾಪುರದಲ್ಲಿ ನಡೆದಂತಹ ಅವಘಡಗಳು ಸಂಭವಿಸದೆ ಇರಲು ಶಾಲಾ ವಾಹನಗಳನ್ನು ಪ್ರತಿನಿತ್ಯ ತಪಾಸಣೆ ನಡೆಸಬೇಕು ಎಂದು ಹೇಳಿದರು.
ಈ ಬಗ್ಗೆ ದಲಿತ ಮುಖಂಡ ರಘುವೀರ್ ಮಾತನಾಡಿ ಜಿಲ್ಲೆಯಲ್ಲಿ ಅಪಘಾತ ತಡೆಯಲು ಸೂಕ್ತ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕಾಗಿದೆ. ಠಾಣಾಧಿಕಾರಿಗಳ ಸಮ್ಮುಖದಲ್ಲಿ ಠಾಣಾ ಮಟ್ಟದ ಸಭೆಗಳನ್ನು ನಡೆಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಹಾಜರಿದ್ದ ಮಂಕಿಸ್ಟಾಂಡ್ನ ಶಾಂತ ಆಳ್ವ ಕಂಪೌಂಡ್ ನಿವಾಸಿಗಳು ಮಾತನಾಡಿ ಪಾಂಡೇಶ್ವರ ಠಾಣೆಯ ವ್ಯಾಪ್ತಿಯಲ್ಲಿ ಸಂದೀಪ್ ಎಂಬಾತನ ಮೇಲೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ವಿಜಯ್ ಎಂಬಾತನನ್ನು ಹುಡುಕುತ್ತಿರುವ ಪೊಲೀಸರು ಶಾಂತಾ ಆಳ್ವ ಕಂಪೌಂಡ್ ನ ದಲಿತ ಕುಟುಂಬದ ನಿವಾಸಿಗಳಿಗೆ ವೃಥಾ ಉಪಟಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಆಪಾದಿಸಿದರು.
ಭಾರತಿ ಎಂಬವರು ಮಾತನಾಡಿ ತನಗೆ ಕೃಷ್ಣ ಎಂಬವರಿಂದ ಹಲ್ಲೆಯಾಗಿದ್ದರೂ ಉರ್ವ ಠಾಣಾಧಿಕಾರಿ ರವೀಶ್ ನಾಯಕ್ ಅವರು ಅದನ್ನು ನಿರ್ಲಕ್ಷಿಸಿ ಆರೋಪಿಯ ಪರ ವಹಿಸಿದ್ದಾರೆ. ಮಹಿಳೆ ಎಂದು ಗೌರವ ಕೊಡದೆ ಪ್ರಕರಣಕ್ಕೆ ನ್ಯಾಯವನ್ನು ನೀಡಿಲ್ಲ ಎಂದು ಆಪಾದಿಸಿದರು.
ದಲಿತ ಮುಖಂಡ ರಘುವೀರ್ ಮಾತನಾಡಿ ಮಾದಕವಸ್ತುಗಳ ಬಗ್ಗೆ ಜಾಗೃತಿ ಮಾಡುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ದಲಿತ ಕಾಲನಿಗಳಲ್ಲಿಯೂ ಮಾಡುವಂತೆ ಆಗ್ರಹಿಸಿದರು.
ಉಮೇಶ್ ಎಂಬವರು ಮಾತನಾಡಿ ನೀರಿನ ಟ್ಯಾಂಕಿಗೆ ವಿಷವನ್ನು ಹಾಕಿ ಕೊಲೆಗೈಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ವರ್ಷವಾದರೂ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದ ಎಸ್ ಐ ಅವರು ನಾನೇ ವಿಷ ಹಾಕಿದ್ದು ಎಂದು ದರ್ಪದಿಂದ ಹೇಳುತ್ತಾರೆ ಎಂದು ದೂರು ನೀಡಿದಾಗ ಡಿಸಿಪಿ ಕೆ.ಎಂ ಶಾಂತರಾಜು ಅವರು ಎಸಿಪಿಯವರಿಗೆ ಒಂದು ವಾರದಲ್ಲಿ ಅರ್ಜಿದಾರರ ಹೇಳಿಕೆಯನ್ನು ಪಡೆದು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.