ಸುಳ್ಯ:ಶಾಲೆಯೆಡೆಗೆ ನನ್ನ ನಡೆ ಕಾರ್ಯಕ್ರಮದ ಮೂಲಕ ಜನಜಾಗೃತಿ : ಡಾ. ಕೃಪಾ ಆಳ್ವ
ಸುಳ್ಯ,ಜೂ.26: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ ಕೃಪಾ ಅಮರ್ ಆಳ್ವ ಶನಿವಾರ ಸುಳ್ಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,"ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯಗಳು ಇತ್ತೀಚಿನ ದಿನಗಳಲ್ಲಿ ಅಲ್ಲ್ಲಲ್ಲಿ ಕಂಡು ಬರುತ್ತಿದೆ. ಇದಕ್ಕೆಲ್ಲಾ ಶಿಕ್ಷಣ ಕೊರತೆಯೇ ಕಾರಣ. ಆದ್ದರಿಂದ ಶಾಲೆಯೆಡೆಗೆ ನನ್ನ ನಡೆ, ಶಿಕ್ಷಣ ನನ್ನ ಹಕ್ಕು ಆಂದೋಲನದ ಮೂಲಕ ಶಿಕ್ಷಣ ಜಾಗೃತಿಯನ್ನು ಹಮ್ಮಿಕೊಳ್ಳುವ ಮೂಲಕ 18 ವರ್ಷದೊಳಗಿನ ಪ್ರತೀ ಮಕ್ಕಳಿಗೆ ಶಿಕ್ಷಣ ಕೊಡಿಸುವ ಚಿಂತನೆ ನಡೆಸಲಾಗಿದೆ" ಎಂದರು.
ಶಾಲೆಯಿಂದ ಹೊರಗುಳಿದಿರುವ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಅದಕ್ಕಾಗಿ ಸರಕಾರ ಕಡ್ಡಾಯ ಶಿಕ್ಷಣ ಹಕ್ಕು ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಇಂದು ಇದು ಸರಿಯಾಗಿ ನಡೆಯುತ್ತಿಲ್ಲ. ರಾಜ್ಯದ ಪ್ರತಿಯೊಂದು ಮಗು ಶಾಲೆಗೆ ಹೋಗಬೇಕು. ಶಿಕ್ಷಣ ಪಡೆಯಬೇಕು ಎಂಬ ಚಿಂತನೆಯಿಂದ ಈಗಾಗಲೇ ರಾಜ್ಯದ 30 ಜಿಲ್ಲೆಗಳಲ್ಲಿ 27 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆಯೂ ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ. ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯಗಳು ಹೆಣ್ಣು ಮಕ್ಕಳ ಮೇಲೆ ಅಲ್ಲಲ್ಲಿ ನಡೆಯುತ್ತಿದೆ. ಇದನ್ನು ಕಡಿಮೆ ಮಾಡಬೇಕಾದರೆ ಶಿಕ್ಷಣ ಅಗತ್ಯ. ಶಿಕ್ಷಣ ಕೊಡಿಸಿದರೆ ಶೇ.50ರಿಂದ 70 ಸಮಸ್ಯೆ ಕಡಿಮೆಯಾದಂತಾಗುತ್ತದೆ. ಮೊದಲು 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಎಂದು ಮಾಡಲಾಗಿತ್ತು. ಇದೀಗ 18 ವರ್ಷದೊಳಗಿನವರೂ ಕಡ್ಡಾಯ ಶಿಕ್ಷಣ ಪಡೆಯಬೇಕು. ಇದಕ್ಕಾಗಿ ಆಂದೋಲನವನ್ನು ನಡೆಸುತ್ತಿರುವುದಾಗಿ" ಅವರು ಹೇಳಿದರು.
ನಡುಗಲ್ಲಿನ ಶಾರಿಕಾ ಮಗುವಿನ ಪ್ರಕರಣದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಇದು ನಾನು ಅಧಿಕಾರಕ್ಕೆ ಬರುವ ಮೊದಲು ಘಟನೆ ನಡೆದಿದೆ. ಶಾರಿಕಾ ಪ್ರಕರಣದ ಕುರಿತು ನಾನು ವಿಚಾರಿಸಿದ್ದೇನೆ. ಮಗು ಹೊಳೆಗೆ ಬಿದ್ದು ಮೃತಪಟ್ಟಿದೆ ಎಂಬ ಬಗ್ಗೆ ಕೇಳಿ ತಿಳಿದಿದ್ದೇನೆ. ಆದರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಿಸಲಾಗುವುದು" ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಹರಿಣಿ ಸದಾಶಿವ, ಕಾಂಗ್ರೆಸ್ ಮುಖಂಡರಾದ ನಿತ್ಯಾನಂದ ಮುಂಡೋಡಿ, ಪಿ.ಎಸ್.ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು, ಸಿ.ಡಿ.ಪಿ.ಒ. ಸುಕನ್ಯಾ ಇದ್ದರು.