ಮಿತಿಮೀರಿ ಶಾಲಾ ಮಕ್ಕಳ ಸಾಗಾಟ ;135 ವಾಹನಗಳ ವಿರುದ್ದ ಪ್ರಕರಣ ದಾಖಲು
ಮಂಗಳೂರು,ಜೂ.26:ಮಂಗಳೂರು ನಗರ ಪೊಲೀಸ್ ಕಮೀಶನರೇಟ್ ವ್ಯಾಪ್ತಿಯಲ್ಲಿ ಕಳೆದ ನಾಲ್ಕುದಿನಗಳಲಿ ವಾಹನಗಳಲ್ಲಿ ಶಾಲಾ ಮಕ್ಕಳ ಸಾಗಾಟಕ್ಕೆ ಸಂಬಂಧಿಸಿದಂತೆ ನಡೆಸಿದ ಕಾರ್ಯಾಚರಣೆಯಲ್ಲಿ 135 ಪ್ರಕರಣಗಳಲ್ಲಿ ವಾಹನ ಮಾಲಕರಿಗೆ ನೊಟೀಸು ಜಾರಿ ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಡಾ.ಸಂಜೀವ ಎಂ ಪಾಟೀಲ್ ಪತ್ರಿಕೆಗೆ ತಿಳಿಸಿದ್ದಾರೆ.
ವಾಹನಗಳಲ್ಲಿ ಮಕ್ಕಳನ್ನು ಕಳುಹಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರು ಸುರಕ್ಷತೆಯ ಬಗ್ಗೆ ಮಾಹಿತಿ ನೀಡಬೇಕು ಕಾನೂನು ಬಾಹಿರವಾಗಿ ಮಕ್ಕಳನ್ನು ವಾಹನದಲ್ಲಿ ಸಾಗಾಟ ಮಾಡುವವರ ವಿರುದ್ಧ ಇಲಾಖೆಯ ವತಿಯಿಂದ ಕಾರ್ಯಾಚರಣೆ ನಡೆಯುತ್ತಿದೆ.ಕೆಲವೊಂದು ಸಂದರ್ಭದಲ್ಲಿ ಹೆಚ್ಚಿನ ಬಾಡಿಗೆ ಹಣ ನೀಡಬೇಕು ಎನ್ನುವ ಕಾರಣಕ್ಕಾಗಿ ಕೆಲವು ಕಡೆಗಳಲ್ಲಿ ಮಕ್ಕಳನ್ನು ಶಾಲಾ ಮಕ್ಕಳ ಸಾಗಾಟಕ್ಕೆ ಪರವಾನಿಗೆ ಇಲ್ಲದ ವಾಹನಗಳಲ್ಲಿ ಕಳುಹಿಸುತ್ತಿರುವುದು ಕಂಡು ಬಂದಿದೆ,ಕೆಲವು ಕಡೆ ಹೆಚ್ಚು ಮಕ್ಕಳ ಜೊತೆ ವಾಹನದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವುದು ಕಂಡು ಬಂದಿದೆ.ಪರಿಣಾಮವಾಗಿ ಅಪಘಾತದ ಸಂದರ್ಭದಲ್ಲಿ ಹೆಚ್ಚಿನ ಪ್ರಾಣಹಾನಿಯೂ ಆಗಬಹುದು ಈ ಬಗ್ಗೆ ಪೋಷಕರು ನಿಗಾವಹಿಸಿ ಪರವಾನಿಗೆ ಇರುವ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಾಗಿಸುವ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬೇಕು.ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಹಳದಿ ಬಣ್ಣವನ್ನು ಬಳಿಯಲು ಸೂಚನೆ ನೀಡಲಾಗಿದೆ ಈ ಬಗ್ಗೆ ಕ್ರಮ ಕೈ ಗೊಳ್ಳಲಾಗುತ್ತಿದೆ ಎಂದು ಸಂಜೀವ ಎಂ ಪಾಟೀಲ್ ತಿಳಿಸಿದ್ದಾರೆ.