ವಿದೇಶಿ ಬ್ಯಾಂಕುಗಳಲ್ಲಿ 13000 ಕೋಟಿ ರೂಪಾಯಿ ಕಪ್ಪು ಹಣ ಪತ್ತೆ!

Update: 2016-06-27 02:53 GMT

ಹೊಸದಿಲ್ಲಿ, ಜೂ. 27: ವಿದೇಶಿ ಬ್ಯಾಂಕ್ ಖಾತೆಗಳಲ್ಲಿರುವ ಕಪ್ಪುಹಣ ವಿರುದ್ಧದ ಸಮರ ಆರಂಭಿಸಿದ ಕೇಂದ್ರದ ಕ್ರಮಗಳು ಫಲ ನೀಡಲಾರಂಭಿಸಿವೆ. ಆದಾಯ ತೆರಿಗೆ ಅಧಿಕಾರಿಗಳು 2011 ಹಾಗೂ 2013ರಲ್ಲಿ ಸ್ವೀಕರಿಸಿದ ಎರಡು ಮಾಹಿತಿಗಳ ಅನ್ವಯ 13 ಸಾವಿರ ಕೋಟಿ ರೂ. ಕಪ್ಪುಹಣ ವಿದೇಶಿ ಖಾತೆಗಳಲ್ಲಿರುವ ಅಂಶ ಬೆಳಕಿಗೆ ಬಂದಿದೆ.

ಜಿನೀವಾದ ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ 400 ಮಂದಿ ಭಾರತೀಯರು ಠೇವಣಿ ಇರಿಸಿರುವುದು ಗಮನಕ್ಕೆ ಬಂದಿದ್ದು, ಫ್ರಾನ್ಸ್ ಸರಕಾರದಿಂದ ಈ ಬಗ್ಗೆ ಮಾಹಿತಿ 2011ರಲ್ಲಿ ಲಭ್ಯವಾಗಿತ್ತು. ಇದರಿಂದಾಗಿ 8,186 ಕೋಟಿ ರೂಪಾಯಿ ಅಘೋಷಿತ ಆದಾಯ ವಿದೇಶಿ ಬ್ಯಾಂಕಿನಲ್ಲಿರುವುದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಇದಕ್ಕಾಗಿ 5,377 ಕೋಟಿ ರೂಪಾಯಿ ತೆರಿಗೆಯನ್ನು 2016ರ ಮಾರ್ಚ್ 31ರೊಳಗೆ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ. ಇದರಲ್ಲಿ 628 ಖಾತೆಗಳ ವಿವರ ಲಭ್ಯವಾಗಿದೆ.

ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ಬಿಡುಗಡೆ ಮಾಡಿದ ಮತ್ತೊಂದು ಮಾಹಿತಿ 2013ರಲ್ಲಿ ಸರಕಾರಕ್ಕೆ ಲಭ್ಯವಾಗಿದ್ದು, ಇದರಲ್ಲಿ ಭಾರತೀಯರಿಗೆ ಸಂಬಂಧಿಸಿದ 5,000 ಕೋಟಿ ರೂಪಾಯಿ ಅಘೋಷಿತ ಹಣ ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಇರುವುದು ಬೆಳಕಿಗೆ ಬಂದಿದೆ. ಇದು 7,000 ಮಂದಿ ಭಾರತೀಯರಿಗೆ ಸಂಬಂಧಿಸಿದ ಮೊತ್ತವಾಗಿದೆ.

ಇದುವರೆಗೆ 55 ಮಂದಿಯ ವಿರುದ್ಧ ತೆರಿಗೆ ಕಳ್ಳತನ ಆರೋಪದ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News