ನಾಚಿಕೆಗೇಡು: ಉಗ್ರರಿಗೆ ಬಲಿಯಾದ ಹುತಾತ್ಮನಿಗೆ ಅವಮಾನ

Update: 2016-06-27 03:05 GMT

ಆಗ್ರಾ/ ಫಿರೋಜಾಬಾದ್, ಜೂ.27: ಪಾಂಪೋರ್‌ನಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್ ಸಿಬ್ಬಂದಿ ಶನಿವಾರ ಬಲಿಯಾದ ಘಟನೆಗೆ ಇಡೀ ದೇಶ ಕಂಬನಿ ಮಿಡಿದಿದ್ದರೆ, ಜಾತಿಪದ್ಧತಿಯ ಅನಿಷ್ಟದಿಂದಾಗಿ ವೀರ್‌ಸಿಂಗ್ ಎಂಬ ಯೋಧನ ಅಂತ್ಯಸಂಸ್ಕಾರವನ್ನು ಸ್ವಗ್ರಾಮದಲ್ಲಿ ನಡೆಸಲು ಅವಕಾಶ ನೀಡದಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್‌ನ ನಗ್ಲಾ ಕೇವಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಸೈನಿಕ, ನಾತ್ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಅಂತ್ಯಕ್ರಿಯೆಗೆ ಗ್ರಾಮದ ಸಾರ್ವಜನಿಕ ಭೂಮಿಯನ್ನು ಬಿಟ್ಟುಕೊಡಲು ಮೇಲ್ವರ್ಗದವರು ನಿರಾಕರಿಸಿದ್ದೇ ಇದಕ್ಕೆ ಕಾರಣ. ಜಿಲ್ಲಾಡಳಿತ ಮಧ್ಯಪ್ರವೇಶಿಸಿದ ಬಳಿಕವಷ್ಠೇ ಅಂತ್ಯಸಂಸ್ಕಾರಕ್ಕೆ 100 ಚದರ ಮೀಟರ್ ಜಾಗ ನೀಡಲು ಮೇಲ್ವರ್ಗದವರು ಒಪ್ಪಿಕೊಂಡರು.

ಗ್ರಾಮದ ರಸ್ತೆಯ ಬಳಿ ಸಾರ್ವಜನಿಕ ಭೂಮಿಯಲ್ಲಿ ಮೃತ ಯೋಧನ ಪುತ್ಥಳಿ ಪ್ರತಿಷ್ಠಾಪಿಸಲು ಯೋಧನ ಕುಟುಂಬದವರು ಇಚ್ಛಿಸಿದ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನ ಈ ವಿವಾದ ಸೃಷ್ಟಿಯಾಗಿತ್ತು. ಅದು ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ವಸ್ತುಪ್ರದರ್ಶನ ನಡೆಯುವ ಜಾಗವಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಹುತಾತ್ಮ ಸೈನಿಕನ ಅಂತ್ಯಕ್ರಿಯೆ ನಡೆಸಿ ಆ ಜಾಗದಲ್ಲಿ ಆತನ ಪುತ್ಥಳಿ ನಿರ್ಮಿಸಲು ಯೋಧನ ಕುಟುಂಬದವರು ಮನವಿ ಮಾಡಿಕೊಂಡರು. ಈ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ ಬಳಿಕ ಗ್ರಾಮಸ್ಥರು ಇದಕ್ಕೆ ಒಪ್ಪಿಗೆ ನೀಡಿದರು ಎಂದು ಕಂತರಿ ಗ್ರಾಮಪಂಚಾಯತ್‌ನ ಪ್ರಧಾನ ವಿಜಯ್ ಸಿಂಗ್ ಹೇಳಿದರು.

52 ವರ್ಷದ ವೀರ್‌ಸಿಂಗ್ ಇಡೀ ಕುಟುಂಬದಲ್ಲಿ ಉದ್ಯೋಗದಲ್ಲಿದ್ದ ಏಕೈಕ ವ್ಯಕ್ತಿ. 1981ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದರು. ಇವರ ಕುಟುಂಬ 500 ಚದರ ಅಡಿಯ ತಗಡು ಹಾಸಿದ ಮನೆಯಲ್ಲಿ ವಾಸವಾಗಿದೆ. ಇವರಿಗೆ ಎಂಎಸ್ಸಿ ಮಾಡುತ್ತಿರುವ 22 ವರ್ಷದ ಪುತ್ರಿ ಸೇರಿದಂತೆ ಮೂವರು ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News