ಪಾಕ್‌ಗೆ ಪ್ರತ್ಯುತ್ತರ ನೀಡುವಾಗ ಹಿಂಜರಿಕೆ ಬೇಡ: ಸೈನಿಕರಿಗೆ ರಾಜ್‌ನಾಥ್

Update: 2016-06-27 03:12 GMT

ರಾಂಚಿ, ಜೂ.27: ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ಯಾವುದೇ ಹಿಂಜರಿಕೆ ಬೇಡ ಎಂದು ಕೇಂದ್ರ ಗೃಹಸಚಿವ ರಾಜ್‌ನಾಥ್ ಸೈನಿಕರಿಗೆ ಸೂಚಿಸಿದ್ದಾರೆ.

ಮೊದಲ ನಾವು ಗುಂಡು ಹೊಡೆಯುವುದು ಬೇಡ. ಆದರೆ ಒಂದು ಗುಂಡು ಗಡಿಯಾಚೆಯಿಂದ ಸಿಡಿದರೂ, ಪ್ರತಿದಾಳಿ ಮಾಡುವಾಗ ನಮ್ಮ ಯೋಧರು ಗುಂಡುಗಳನ್ನು ಲೆಕ್ಕ ಹಾಕುವುದು ಬೇಡ ಎಂದು ಹೇಳಿದರು. ಜಾರ್ಖಂಡ್ ರಾಜಧಾನಿಯಲ್ಲಿ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಸಾಮೂಹಿಕ ಗಿಡನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಯೋಜನೆಯಡಿ ರಾಜ್ಯದಲ್ಲಿ ಒಂದು ಕೋಟಿ ಗಿಡಗಳನ್ನು ನೆಡಲು ಪಕ್ಷ ನಿರ್ಧರಿಸಿದೆ.

ಪುಲ್ವಾಮಾ ಜಿಲ್ಲೆಯ ಅರೆ ಸೇನಾ ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನಕ್ಕೆ ಭಯೋತ್ಪಾದನೆ ನಿಗ್ರಹಿಸುವ ಇಚ್ಛಾಶಕ್ತಿ ಇಲ್ಲ ಎಂದು ಟೀಕಿಸಿದರು. ಗಡಿಯಲ್ಲಿ ಸೈನಿಕರು ಸಾಯುವಾಗ ನಮಗೆ ನೋವಾಗುತ್ತದೆ. ಇಬ್ಬರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಎಂಟು ಮಂದಿ ಯೋಧರನ್ನು ಸಾಯಿಸಿದ್ದಾರೆ. ಆದರೆ ಇಬ್ಬರನ್ನೂ ನಮ್ಮ ಸೈನಿಕರು ಸದೆಬಡಿದಿದ್ದಾರೆ. ಮೃತ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲೇ, ಭಯೋತ್ಪಾದಕ ಕೃತ್ಯಗಳನ್ನು ಭಾರತ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡುತ್ತಿದ್ದೇನೆ ಎಂದರು.

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶನಿವಾರ ಸಿಆರ್‌ಪಿಎಫ್ ಯೋಧರ ವಾಹನದ ಮೇಲೆ ಉಗ್ರರು ದಾಳಿ ನಡೆಸಿದಾಗ ಎಂಟು ಮಂದಿ ಯೋಧರು ಅಸು ನೀಗಿದ್ದರು. ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಈ ಕೃತ್ಯದ ಹೊಣೆ ಹೊತ್ತಿದೆ. ಜಾರ್ಖಂಡ್, ಬಿಹಾರ, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯ ಉಗ್ರರ ವಿರುದ್ಧ ಹೋರಾಡಲೂ ಸರಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News