ಅಜ್ಜಿಗೆ ವಿಷವಿಕ್ಕಿ ಕೊಂದ ಮೊಮ್ಮಗ, ಆತನ ಪತ್ನಿಯ ಬಂಧನ
ಮಣ್ಣಾರ್‌ಕ್ಕಾಡ್, ಜೂನ್ 27: ರಸ್ತೆಯ ಬದಿಯಲ್ಲಿ ಮೃತರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಯೋವೃದ್ಧೆಯ ಅಸಹಜ ಸಾವು ಕೊಲೆಕೃತ್ಯವಾಗಿದ್ದು ಮೊಮ್ಮಗ ಮತ್ತು ಆತನ ಪತ್ನಿ ವಿಷಪ್ರಾಶನ ಮಾಡಿ ವೃದ್ಧೆಯನ್ನು ಕೊಂದು ಹಾಕಿ ದಾರಿಬದಿಗೆ ಎಸೆದೆದ್ದೆಂದು ತನಿಖೆಯಲ್ಲಿ ಬಹಿರಂಗವಾಗಿದೆ.ಕರಿಂಬುಯ ತೊಟ್ಟಾರ ಮನೆಯ ಮಮ್ಮಿ ಎಂಬವರ ಪತ್ನಿ ನಬೀಸಾ(71) ಕೊಲೆಗೀಡಾದ ವಯೋವೃದ್ಧ ಮಹಿಳೆಯಾಗಿದ್ದು ಕೊಲೆಕೃತ್ಯವೆಸಗಿದ ಆರೋಪದಲ್ಲಿ ಕರಿಂಬುಯ ತಟ್ಟಾರ ಪಡಿಂಚಾರೇದಿಲ್ ಮನೆಯ ಬಷೀರ್(33), ಆತನ ಪತ್ನಿ ಕಂಡಮಂಗಲಂ ಫಝೀಲಾ(27)ರನ್ನು ಬಂಧಿಸಲಾಗಿದೆ.
ಕಳೆದ ಶುಕ್ರವಾರ ಮಧ್ಯಾಹ್ನ ಆರ್ಯಂಬಾವಿಎಂಬಲ್ಲಿ ಒಟ್ಟಪಾಲಂ ರಾಜ್ಯ ಹೆದ್ದಾರಿಯ ಬದಿಯಲ್ಲಿ ನಬೀಸಾ ಮೃತರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹದ ಬಳಿ ಒಂದು ಪತ್ರವೂ ಸಿಕ್ಕಿತ್ತು. ಆನಂತರ ತನಿಖೆ ನಡೆಸಿದ ಪೊಲೀಸರು ಕೊಲೆ ಆರೋಪಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನೋಟ್ಟಮಲದ ಎಂಬಲ್ಲಿನ ಸಂಬಂಧಿಕರ ಮನೆಗೆ ವೃದ್ಧೆ ಉಪವಾಸ ತೊರೆಯಲು (ಇಫ್ತಾರ್) ಹೋಗಿದ್ದರು. ಆನಂತರ ಜೂನ್ 22ರಿಂದ ವೃದ್ಧೆ ಕಾಣೆಯಾಗಿದ್ದರು. ಜೂನ್ 24ಕ್ಕೆ ಮೃತದೇಹ ರಸ್ತೆ ಪಕ್ಕದಲ್ಲಿ ಬಿದ್ದುಕೊಂಡ ಸ್ಥಿತಿಯಲ್ಲಿ ದೊರಕಿದೆ. ಪೊಲೀಸರು ತಿಳಿಸುವ ಪ್ರಕಾರ ಪತಿ ಬಶೀರ್‌ನ ತಂದೆಗೆ ಆಹಾರದಲ್ಲಿ ವಿಷ ಹಾಕಿಕೊಟ್ಟ ಕಾರಣದಿಂದ ಪಝೀಲಾಳನ್ನು ಮನೆಯಿಂದ ಹೊರಹಾಕಲಾಗಿತ್ತು. ಅಜ್ಜಿ ಆಮೇಲೆ ಮನೆಗೆ ಸೇರಿಸಿಕೊಳ್ಳಲು ಅಡ್ಡಿಯಾಗಿದ್ದರು. ಆದ್ದರಿಂದ ಬಶೀರ್ ಮತ್ತು ಫಝೀಲಾ ಜೊತೆಗೂಡಿ ವೃದ್ಧೆಯನ್ನು ಇಲ್ಲದಾಗಿಸುವ ಸಂಚು ಹೆಣದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಶೀರ್ ಮತ್ತು ಪಝೀಲಾ ಜೂನ್ 22ರಂದು ರಾತ್ರೆಯೇ ಅಜ್ಜಿ ನಬೀಸಾರಿಗೆ ನೀಡಿದ್ದ ಆಹಾರದಲ್ಲಿ ವಿಷಪ್ರಾಶನ ಮಾಡಿದ್ದರು. ಆದರೆ ನಬೀಸಾರಿಗೆ ಅಸ್ವಾಸ್ಥ್ಯ ಏನೂ ಕಾಣಿಸಿರಲಿಲ್ಲ. ನಂತರ ತಡರಾತ್ರೆಯಲ್ಲಿ ಬಲಪ್ರಯೋಗಿಸಿ ಬಶೀರ್ ಮತ್ತು ಪಝೀಲಾ ವಿಷವನ್ನು ನಬೀಸಾರ ಬಾಯಿಗೆ ಸುರಿದಿದ್ದರು. ಬೆಳಗ್ಗೆ ಅಜ್ಜಿ ಮೃತರಾದದ್ದು ಅವರಿಬ್ಬರಿಗೆ ಖಾತ್ರಿಯಾಗಿತ್ತು. ಮೃತದೇಹವನ್ನು ಒಂದು ದಿವಸ ಮನೆಯಲ್ಲಿ ಇಟ್ಟು ಮರುದಿವಸ ಮೃತದೇಹವನ್ನು ರಸ್ತೆ ಬದಿ ಎಸೆದಿದ್ದರು. ತನಿಖೆಯಲ್ಲಿ ಇದು ಖಚಿತಗೊಂಡ ಮೇಲೆ ಪೊಲೀಸರು ಫಝೀಲಾ ಮತ್ತು ಬಶೀರ್‌ನನ್ನು ವಿಚಾರಣೆಯ ನೆಪದಲ್ಲಿ ಉಪಾಯವಾಗಿ ಠಾಣೆಗೆ ಕರೆಯಿಸಿಕೊಂಡು ನಂತರ ಬಂಧಿಸಿದ್ದಾರೆಂದು ವರದಿಯಾಗಿದೆ.