×
Ad

ಜುಲೈ 2ಮತ್ತು 3ರಂದು ‘ಆಳ್ವಾಸ್ ಪ್ರಗತಿ’

Update: 2016-06-27 12:58 IST

ಮಂಗಳೂರು,ಜೂ.27: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಜುಲೈ 2 ಮತ್ತು 3ರಂದು ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ನಡೆಯಲಿದ್ದು, ಸುಮಾರು 400ರಷ್ಟು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 350 ಕಂಪೆನಿಗಳು ಭಾಗವಹಿಸುವಿಕೆಯನ್ನು ಖಾತ್ರಿ ಪಡಿಸಿದ್ದು, ಕಂಪೆನಿಗಳ ಮಾಹಿತಿಗಳು  www.alvaspragati.com ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.

ಅಮೆಝಾನ್, ಎಚ್‌ಪಿ, ಟಿಸಿಎಸ್, ಎನ್‌ಎಂಸಿ, ಒಕಾರ್ಡ್‌ ಹಾಸ್ಪಿಟಲ್, ಯುಎಇ ಎಕ್ಸ್‌ಚೇಂಜ್, ಐಬಿಎಂ, ಹೊಂಡ, ಒರಾಕಲ್, ಕೆಮ್‌ವೆಲ್, ಆ್ಯಕ್ಸಿಸ್ ಬ್ಯಾಂಕ್, ರಿಲಾಯನ್ಸ್ ಕಮ್ಯುನಿಕೇಶನ್, ಐಡಿಯಾ, ಕೆಫೆ ಕಾಫಿ ಡೇ, ಎರಿಕ್ಸನ್, ಕೊಲಂಬಿಯಾ ಏಷ್ಯಾ ಹಾಸ್ಪಿಟಲ್, ರೊಬೊಸಾಫ್ಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್, ನಾರಾಯಣ ಹಾಸ್ಪಿಟಲ್ಸ್, ಟಾಟಾ ಮೊಟಾರ್ಸ್, ನಿಂಜಾಕಾರ್ಟ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕಿರ್ಲೋಸ್ಕಾರ್ ಎಲೆಕ್ಟ್ರಿಕ್, ಟಿವಿಎಸ್ ಮೋಟಾರ್ಸ್, ಬಿಎಫ್‌ಡಬ್ಲೂ, ಟೆಕ್‌ಮಹೇಂದ್ರ, ಆದಿತ್ಯಾ ಬಿರ್ಲಾ ಗ್ರೂಪ್ ಹುವೇಯಿ, ಬೋದ್ ಟೆಕ್ನಾಲಜೀಸ್, ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ಇಂಡೋ- ಯುಎಸ್‌ಎಂಐಎಂ ಮೊದಲಾದ ಕಂಪೆನಿಗಳೂ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುತ್ತಿವೆ.

ಐಟಿಐ ಅಭ್ಯರ್ಥಿಗಳಿಗೆ ಬಸ್ಸು ವ್ಯವಸ್ಥೆ

ಉದ್ಯೋಗ ಮೇಳಕ್ಕೆ ಪೂರಕವಾಗಿ ಜೂನ್ 25 ಮತ್ತು 26ರಂದು ನಡೆದ ಪೂರ್ವಭಾವಿ ತಯಾರಿ ತರಬೇತಿಯಲ್ಲಿ 538 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಮೇಳದಲ್ಲಿ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಸಿಎ ಪದವೀಧರರಿಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗಾವಕಾಶಗಳಿವೆ. ಐಟಿ ಇಂಜನಿಯರ್‌ಗಳಿಗೆ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಅವಕಾಶವಿದ್ದು, ಐಟಿಐ ಮತ್ತು ಡಿಪ್ಲೊಮಾ ಪದವೀಧರರಿಗೆ ಮ್ಯಾನುಫ್ಯಾಕ್ಚರಿಂಗ್ ಮತ್ತು ಅಟೋಮೊಬೈಲ್ ಕ್ಷೇತ್ರಗಳಲ್ಲಿ ಅವಕಾಶವಿದೆ. ಐಟಿಐ ಅಭ್ಯರ್ಥಿಗಳಿಗೆ ತಮ್ಮ ಐಟಐ ಕೇಂದ್ರಗಳಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ವಿವರಗಳಿಗೆ ವೆಬ್‌ಸೈಟ್‌ನಲ್ಲಿ ನೀಡಿರುವ ದೂರವಾಣಿ ಸಂಖ್ಯೆಯ ಮೂಲಕ ವಿವರ ಪಡೆಯಬಹುದು ಎಂದು ವಿವೇಕ್ ಆಳ್ವ ಹೇಳಿದರು.

ಮೇಳದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಹೊಂದಿರುವವರಿಗೂ ಸೂಕ್ತ ಅವಕಾಶಗಳು ಲಭ್ಯವಿವೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸೀಮಿತ ಅವಕಾಶಗಳಿದ್ದು, ಈ ಕ್ಷೇತ್ರದ ಅಭ್ಯರ್ಥಿಗಳು ಇತರೆ ಉದ್ಯೋಗಗಳನ್ನು ಆಯ್ದುಕೊಳ್ಳಬಹುದು. ನೋಂದಣಿ ಉಚಿತವಾಗಿದ್ದು, ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್ ನೋಂದಣಿ ಮಾಡಿಕೊಂಡವರು ಜುಲೈ 2ರ ಬೆಳಗ್ಗೆ 8 ಗಂಟೆಯಿಂದ ಕ್ಷೇತ್ರವಾರು ಕಲರ್ ಕೋಡಿಂಗ್ ಕೌಂಟರ್‌ಗಳಿಗೆ ಆಗಮಿಸಬೇಕು. ಮೇಳದಂದು ಸ್ಥಳದಲ್ಲಿಯೇ ನೋಂದಣಿಗೂ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಮಾರ್ಗದರ್ಶಿ ಕೇಂದ್ರ, ಕ್ಲಾರಿಟಿ ವಾಲ್, ಡಿಜಿಟಲ್ ಡಿಸ್‌ಪ್ಲೇ ವ್ಯವಸ್ಥೆಯನ್ನು ಮಾಡಲಾಗಿದೆ. ಅಭ್ಯರ್ಥಿಗಳಿಗೆ ಪೂರಕ ಹಾಗೂ ಸಂಪೂರ್ಣ ಮಾಹಿತಿಗಳು ಆಳ್ವಾಸ್ ಪ್ರಗತಿಯ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಿರುತ್ತದೆ ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ಲೇಸ್‌ಮೆಂಟ್ ಮುಖ್ಯಸ್ಥರಾದ ಜಯಶ್ರೀ ಸುಧಾಕರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಪದ್ಮನಾಭ ಶೆಣೈ, ಕಲ್ಯಾಣ ಅಧಿಕಾರಿ ಸಂಪತ್ ನಾಯಕ್, ಉದ್ಯೋಗ ಪ್ರಮುಖ ರವೀಂದ್ರ ಶೆಣೈ ಉಪಸ್ಥಿತರಿದ್ದರು.

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ

  • 5-10 ಭಾವಚಿತ್ರ
  • ಎಲ್ಲಾ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿ)
  • ಬಯೋಡಾಟಾ
  • ಆನ್‌ಲೈನ್ ನೋಂದಣಿ ಸಂಖ್ಯೆಯೊಂದಿಗೆ ಜುಲೈ 2 ಮತ್ತು 3ರ ಬೆಳಗ್ಗೆ 8:30ಕ್ಕೆ ಉದ್ಯೋಗ ಮೇಳದ ಸ್ಥಳದಲ್ಲಿ ಹಾಜರಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9611686148, 8494934852ನ್ನು ಸಂಪರ್ಕಿಸಬಹುದು.
  • ಇಮೇಲ್: placement.alvas@gmail.com. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News