‘‘ಮುಸ್ಲಿಮಳಾಗಿದ್ದಕ್ಕೆ ನಾಚಿಕೆ’’
ಜಮ್ಮು, ಜೂ.27: ಪಾಂಪೋರ್ ಉಗ್ರ ದಾಳಿಯಲ್ಲಿ ಎಂಟು ಮಂದಿ ಸಿಆರ್‌ಪಿಎಫ್ ಜವಾನರು ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸುತ್ತಾ ‘‘ಮುಸ್ಲಿಮಳಾಗಿದ್ದಕ್ಕೆ ತನಗೆ ನಾಚಿಕೆ’’ಯಾಗಿದೆಯೆಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ನೀಡಿರುವ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಚಾರದಲ್ಲಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಜುನೈದ್ ಮಟ್ಟು ‘‘ಉಗ್ರವಾದಕ್ಕೆ ಧರ್ಮವಿಲ್ಲವೆಂದು ಇದೇ ಮೆಹಬೂಬ ಹಿಂದೆ ಹೇಳಿದ್ದರು. ಈಗ ಒಮ್ಮೆಲೇ ಉಗ್ರವಾದ ಇಸ್ಲಾಮ್‌ನಿಂದ ಹುಟ್ಟಿಕೊಂಡಿದೆ ಹಾಗೂ ಮುಸ್ಲಿಮರು ಇದಕ್ಕೆ ನಾಚಿಕೆ ಪಟ್ಟುಕೊಳ್ಳಬೇಕು ಎಂದು ಅವರು ತಿಳಿದಿದ್ದಾರೆ. ಮುಖ್ಯಮಂತ್ರಿಯೊಬ್ಬರಿಂದ ಇಂತಹ ಹೇಳಿಕೆ ನಾಚಿಕೆಗೀಡು’’ ಎಂದು ಹೇಳಿದ್ದಾರೆ.
‘‘ಒಂದೋ ಅವರು ವಿಹಿಂಪ ಹಾಗೂ ಆರೆಸ್ಸೆಸ್ ಸಂಘಟನೆಗಳಿಗೆ ನಿಷ್ಠೆ ತೋರಿಸಲು ಯತ್ನಿಸುತ್ತಿದ್ದಾರೆ ಇಲ್ಲವೇ ಮುಸ್ಲಿಂ ಸಮಾಜ, ದೇಶ ಹಾಗೂ ಇಸ್ಲಾಂ ಧರ್ಮಕ್ಕೆ ಹೊಡೆತ ನೀಡಿ ರಾಜಕೀಯ ಗುರಿ ಸಾಧಿಸಲೆತ್ನಿಸುತ್ತಿದ್ದಾರೆ,’’ಎಂದು ಜುನೈದ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಅತ್ತ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಕೂಡ ಟ್ವೀಟ್ ಮಾಡಿ ‘‘ಹಲವಾರು ವರ್ಷಗಳ ತನಕ ಉಗ್ರವಾದಕ್ಕೆ ಧರ್ಮವಿಲ್ಲವೆಂದು ಹೇಳಿಕೊಂಡ ಮೆಹಬೂಬ ಮುಫ್ತಿ ಈಗ ಇಸ್ಲಾಮಿಕ್ ಉಗ್ರವಾದದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ,’’ಎಂದು ಬರೆದಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಸಿಆರ್‌ಪಿಎಫ್ ಯೋಧರ ಪಾರ್ಥಿವ ಶರೀರಗಳಿಗೆ ಹೂಗುಚ್ಛವಿಟ್ಟು ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮೆಹಬೂಬ ‘‘ಇಂತಹ ಘಟನೆಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ, ನಾವು ಕಾಶ್ಮೀರಕ್ಕೆ ಕೆಟ್ಟ ಹೆಸರು ತರುತ್ತಿದ್ದೇವೆ ಹಾಗೂ ನಾವು ಪಾಲಿಸುತ್ತಿರುವ ಧರ್ಮಕ್ಕೂ ಇದರಿಂದ ತೊಂದರೆ’’ ಎಂದು ಹೇಳಿದ್ದರು.