×
Ad

ಉತ್ತರ ಪ್ರದೇಶ ಕಾಂಗ್ರೆಸ್ ಇಫ್ತಾರ್ ಕಾರ್ಯಕ್ರಮ ರದ್ದು

Update: 2016-06-27 13:35 IST

ಲಕ್ನೋ, ಜೂ.27: ಹಲವು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವೊಂದನ್ನು ಮುರಿದಿರುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಈ ಬಾರಿಯ ‘ರೋಝಾ ಇಫ್ತಾರ್’ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ಸೋಮವಾರ ತಿಳಿಸಿದೆ. ಈ ರದ್ದತಿಗೆ ಯಾವುದೇ ಕಾರಣವನ್ನು ಅಧಿಕೃತವಾಗಿ ನೀಡಿರದಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡ ಒಂದು ನಿರ್ಧಾರದಂತೆಯೇ ರಾಜ್ಯದಲ್ಲಿಯೂ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಜುಲೈ 1 ರಂದು ನಡೆಯುವುದೆಂದು ನಿಗದಿ ಪಡಿಸಲಾದ ಈ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ವ್ಯವಹಾರಗಳ ಉಸ್ತುವಾರಿ ಹಾಗೂ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಭಾಗವಹಿಸಲಿದ್ದರು.

ಇಫ್ತಾರ್ ರದ್ದತಿ ವಿಚಾರದಲ್ಲಿ ಪಕ್ಷ ಕಾರ್ಯಕರ್ತರು ವಿಭಿನ್ನ ಅಭಿಪ್ರಾಯ ಹೊಂದಿದ್ದು ಈ ನಿರ್ಧಾರ ಪಕ್ಷದ ಬೆಂಬಲಿಗರಾಗಿರುವ ಅಲ್ಪಸಂಖ್ಯಾತರಿಗೆ ತಪ್ಪು ಸಂದೇಶ ಕಳುಹಿಸಿದಂತಾಗುವುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

‘‘ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ನಾಯಕನೊಬ್ಬನನ್ನು ಬಿಂಬಿಸುವ ವಿಚಾರದಲ್ಲಿ ಪ್ರಶಾಂತ್ ಕಿಶೋರ್ ನೇತೃತ್ವದ ಚುನಾವಣಾ ತಂತ್ರ ರೂಪಿಸುವ ತಂಡ ಈಗಾಗಲೇ ಹೇಳುತ್ತಿರುವ ಹಿನ್ನೆಲೆಯಲ್ಲಿ ಇದೀಗ ಇಫ್ತಾರ್ ಕೂಡ ರದ್ದುಗೊಂಡಿರುವುದು ಅಲ್ಪಸಂಖ್ಯಾತರ ಮನದಲ್ಲಿ ಭಯದ ವಾತಾವರಣ ಸೃಷ್ಟಿಸಿದಂತಾಗುವುದು’’ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಈ ವಾದವನ್ನು ಒಪ್ಪದ ಇನ್ನೊಬ್ಬ ಹಿರಿಯ ನಾಯಕನ ಪ್ರಕಾರ ಇಫ್ತಾರ್ ಕಾರ್ಯಕ್ರಮಕ್ಕೆ ಬಳಸಲಾಗುವ ಹಣವನ್ನು ಬಡ ಮುಸ್ಲಿಮ್ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ರಮಝಾನ್ ತಿಂಗಳಲ್ಲಿ ಉಪಯೋಗಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News