ಬಾಳಿಗಾ ಕೊಲೆ ಪ್ರಕರಣ: ನರೇಶ್ ಶೆಣೈಗೆ 3 ದಿನ ಪೊಲೀಸ್ ಕಸ್ಟಡಿ
Update: 2016-06-27 14:02 IST
ಮಂಗಳೂರು, ಜೂ. 27: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್‌ನ ಸಂಸ್ಥಾಪಕ ಎಂ.ನರೇಶ್ ಶೆಣೈಯನ್ನು ನಗರ ಪೊಲೀಸಲು ಇಂದು ಇಲ್ಲಿನ 3ನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಜೂ.30ರವರೆಗೆ ಪೊಲೀಸ್ ಕಸ್ಟಡಿ ನೀಡಿದೆ.
ನರೇಶ್ ಶೆಣೈಯನ್ನು ಸಿಸಿಬಿ ಪೊಲೀಸರು ಜೂನ್ 26ರಂದು ಉಡುಪಿಯ ಹೆಜಮಾಡಿಯಿಂದ ಬಂಧಿಸಿದ್ದರು. ಸೋಮವಾರ ಬೆಳಗ್ಗೆ ಪೊಲೀಸರು ಆರೋಪಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಆರೋಗ್ಯವನ್ನು ತಪಾಸಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ಪೊಲೀಸರು 7 ದಿನಗಳ ಕಾಲ ಕಸ್ಟಡಿಗೆ ಕೋರಿದ್ದರಾದರೂ ನ್ಯಾಯಾಧೀಶ ಮಂಜುನಾಥ ಅವರು ಜೂ.30ರವರೆಗೆ ಪೊಲೀಸ್ ಕಸ್ಟಡಿಗೆ ಆದೇಶ ನೀಡಿದರು.