×
Ad

ಹೊರ ದೇಶಗಳಿಂದ ಅಕ್ರಮ ಅಡಿಕೆ ಆಮದು ವಿರುದ್ಧ ಧರಣಿ: ಸಚಿನ್ ಮಿಗಾ

Update: 2016-06-27 17:54 IST

ಮಂಗಳೂರು,ಜೂ.27: ದೇಶಕ್ಕೆ ನೆರೆಯ ರಾಷ್ಟ್ರಗಳಿಂದ ಅಕ್ರಮವಾಗಿ ಅಡಿಕೆ ರಫ್ತಾಗುತ್ತಿರುವ ಹಿನ್ನೆಲೆಯಲ್ಲಿ ಅಡಿಕೆ ಧಾರಣೆ ತೀವ್ರವಾಗಿ ಕುಸಿಯುತ್ತಿರುವುದರಿಂದ ಕೇಂದ್ರ ಸರಕಾರದ ಗಮನ ಸೆಳೆಯುವ ಸಲುವಾಗಿ ಕೊಲ್ಕತ್ತಾ ಗಡಿಯಲ್ಲಿ ಅಡಿಕೆ ಬೆಳೆಗಾರರ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಡೋನೇಶ್ಯಾ, ಬರ್ಮಾ ಮೊದಲಾದ ರಾಷ್ಟ್ರಗಳಿಂದ ದೇಶದ ಕೊಲ್ಕತ್ತಾ ಬಂದರಿನ ಮೂಲಕ ಅಕ್ರಮವಾಗಿ ಅಡಿಕೆ ರಫ್ತಾಗುತ್ತಿದೆ. ಮಾತ್ರವಲ್ಲದೆ, ಪ್ರಧಾನಿ ಮೋದಿಯವರು ಸಾರ್ಕ್ ರಾಷ್ಟ್ರಗಳ ಜೊತೆ ಮಾಡಿಕೊಂಡಿರುವ ಒಪ್ಪಂದವೂ ಅಡಿಕೆ ಬೆಲೆಗೆ ಮಾರಕವಾಗಿ ಪರಿಣಮಿಸಿದೆ. ಹಿಂದೆ ಆನಂದ್ ಶರ್ಮಾ ವಾಣಿಜ್ಯ ಸಚಿವರಾಗಿದ್ದ ವೇಳೆ ದೇಶದ ಗಡಿಗಳಲ್ಲಿ 24 ಗಂಟೆಯೂ ವಿಜಿಲೆನ್ಸ್ ಪಡೆಯನ್ನು ನಿಯೋಜಿಸುವ ಮೂಲಕ ಅಕ್ರಮ ಅಡಿಕೆ ಭಾರತಕ್ಕೆ ಆಮದಾಗುವುದನ್ನು ತಡೆಗಟ್ಟಿದ್ದರು. ಆದರೆ ಆ ವಿಜಿಲೆನ್ಸ್ ವ್ಯವಸ್ಥೆಯನ್ನು ಪ್ರಸ್ತುತ ನಿಲ್ಲಿಸಿರುವ ಮಾಹಿತಿ ಇದೆ. ಇದರಿಂದ ಅಕ್ರಮ ಅಡಿಕೆ ಅವ್ಯಾಹತವಾಗಿ ದೇಶಕ್ಕೆ ಆಮದಾಗುತ್ತಿದೆ ಎಂದು ಸಚಿನ್ ಮಿಗಾ ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳೊಳಗೆ ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಈ ಬಗ್ಗೆ ಚರ್ಚಿಸಿ ಧರಣಿ ಸಂಘಟಿಸಲಾಗುವುದು. ರಾಜ್ಯದ ಸುಮಾರು 5, 000 ರೈತರು ಈ ಧರಣಿಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯಲಿದ್ದಾರೆ ಎಂದು ಅವರು ಹೇಳಿದರು. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ತಾವು ಅಧಿಕಾರಕ್ಕೆ ಬಂದಾಕ್ಷಣ ಸುಪ್ರೀಂ ಕೋರ್ಟ್‌ಗೆ ಅಡಿಕೆ ಹಾನಿಕಾರಕವಲ್ಲ ಎಂಬ ಬಗ್ಗೆ ವರದಿ ಮತ್ತು ಪ್ರಮಾಣ ಪತ್ರ ಸಲ್ಲಿಸುವುದಾಗಿ ಹೇಳಿ ರೈತರಿಗೆ ಭರವಸೆ ನೀಡಿತ್ತು. ಅಂದು ಭರವಸೆ ನೀಡಿದವರಲ್ಲಿ ಒಬ್ಬರಾಗಿರುವ ದ.ಕ. ಜಿಲ್ಲೆಯವರೇ ಆಗಿರುವ, ಪ್ರಸ್ತುತ ಕೇಂದ್ರದಲ್ಲಿ ಕಾನೂನು ಸಚಿವರಾಗಿರುವ ಸದಾನಂದ ಗೌಡರೂ ಸೇರಿದಂತೆ ಬಿಜೆಪಿಯವರು ಎರಡು ವರ್ಷವಾದರೂ ತಮ್ಮ ಭರವಸೆಯನ್ನು ಈಡೇರಿಸಿಲ್ಲ ಎಂದು ಸಚಿನ್ ಮಿಗಾ ಟೀಕಿಸಿದರು.

ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲದ ಅಸಲಿನ ಶೇ. 50ರಷ್ಟನ್ನು ಮನ್ನಾ ಮಾಡಿದರೆ, ಸಹಕಾರಿ ಸಂಘಗಳಲ್ಲಿರುವ ರೈತರ ಸಾಲದ ಶೇ.50ರಷ್ಟು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇತ್ತೀಚೆಗೆ ಹಾವೇರಿಯಲ್ಲಿ ಘೋಷಿಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರ ನಿಯೋಗವು ಪ್ರಧಾನಿ ಬಳಿಗೆ ಹೋಗಿ ಈ ಬಗ್ಗೆ ಮನವರಿಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.

ಸೈನಿಕರಂತೆ ರೈತರಿಗೂ ಪಿಂಚಣಿ ಸಿಗಲಿ

ಗಡಿ ಕಾಯುವ ಮೂಲಕ ಸೈನಿಕರು ದೇಶ ಸೇವೆ ಮಾಡಿದರೆ, ಅನ್ನ ನೀಡುವ ಮೂಲಕ ರೈತರೂ ಜನಸೇವೆ ಮಾಡುತ್ತಿದ್ದಾರೆ. ಹಾಗಾಗಿ ಸೈನಿಕರಿಗೆ ನೀಡಲಾಗುವ ಪಿಂಚಣಿಯನ್ನು ರೈತರಿಗೂ ನೀಡಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರ ಸರಕಾರದ ರಾಷ್ಟ್ರೀಯ ಬೆಳೆ ವಿಮಾ ಯೋಜನೆ ಅವೈಜ್ಞಾನಿಕವಾಗಿದ್ದು, ಅದರಿಂದ ವೈಯಕ್ತಿಕವಾಗಿ ರೈತರಿಗೆ ಯಾವುದೇ ಪ್ರಯೋಜನವಾಗದ ಕಾರಣ ಅದನ್ನು ಮಾರ್ಪಾಟು ಮಾಡಬೇಕು ಎಂದರು.

ರಾಜ್ಯದಲ್ಲಿ 2015-16ನೆ ಸಾಲಿನಲ್ಲಿ 1,316 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ 96 ಜನ ಅಡಿಕೆ ಬೆಳೆಗಾರರೂ ಸೇರಿದ್ದಾರೆ. ಸಾಲ ಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕೇಂದ್ರ ಸರಕಾರದ ಸಂಸದರು ಪ್ರಧಾನಿಗೆ ವಸ್ತು ಸ್ಥಿತಿಯ ಬಗ್ಗೆ ಮನವರಿಕೆ ಮಾಡಿ ರೈತ ಸಾಲ ಮನ್ನಾಕ್ಕೆ ಮುಂದಾಗಬೇಕು. ಪ್ರಧಾನಿ ಮೋದಿಯವರು 2,000 ಕೋಟಿ ರೂ. ಖರ್ಚು ಮಾಡಿ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ನಿರ್ಮಿಸುವುದನ್ನು ಕರ್ನಾಟಕ ಕಾಂಗ್ರೆಸ್ ಕಿಸಾನ್ ಸಂಘ ವಿರೋಧಿಸುತ್ತದೆ. ರೈತರ ಸಮಸ್ಯೆಗಳನ್ನು ಬಗೆಹರಿಸಿದ ಬಳಿಕ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ನಿರ್ಮಾಣವಾಗಲಿ ಎಂದು ಸಚಿನ್ ಮಿಗಾ ಹೇಳಿದರು.

ಆತ್ಮಹತ್ಯೆ ಬಗ್ಗೆ ರೈತರೊಂದಿಗೆ ಸಮಾಲೋಚನೆಗೆ ಕ್ರಮ

ಆತ್ಮಹತ್ಯೆ ಪರಿಹಾರವಲ್ಲ ಎಂಬುದನ್ನು ರೈತರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಜುಲೈ ಪ್ರಥಮ ವಾರದಲ್ಲಿ ರಾಜ್ಯದ ಬ್ಲಾಕ್ ಕಾಂಗ್ರೆಸ್‌ನ 418 ಕಿಸಾನ್ ಘಟಕಗಳ ಪದಾಧಿಕಾರಿಗಳಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಾಗಾರ ನಡೆಸಿ ಮಾಹಿತಿ ಒದಗಿಸುವ ಕಾರ್ಯ ನಡೆಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿನ್ ಮಿಗಾ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕಾಂಗ್ರೆಸ್ ನಾಯಕರಾದ ಟಿ.ಕೆ. ಸುಧೀರ್, ಪಿ.ವಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಆಪ್ತರಿಂದ ಅಡಿಕೆ ಆಮದು ಬೆಲೆ ಕುಸಿತಕ್ಕೆ ಕಾರಣ!

ಪ್ರಧಾನಿ ನರೇಂದ್ರ ಮೋದಿಯವರ ಆಪ್ತರಾಗಿರುವ ವಿಮಲ್ ಕುಮಾರ್ ಮೋದಿ ಸೇರಿದಂತೆ ಹಲವಾರು ಮಂದಿ ಮಲೇಷ್ಯಾ, ಇಂಡೋನೇಷ್ಯಾ ಮೊದಲಾದ ರಾಷ್ಟ್ರಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕಾರಣ ಅಡಿಕೆ ಬೆಲೆ ತೀವ್ರವಾಗಿ ಕುಸಿಯುತ್ತಿದೆ ಎಂದು ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಆಪಾದಿಸಿದರು.

ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಿತರಾಗಿರುವ ವಿಮಲ್ ಮೋದಿ ಏಳು ತಿಂಗಳ ಹಿಂದೆ ಇಂಡೋನೇಷ್ಯಾ, ಮಲೇಷ್ಯಾದಿಂದ 40,000 ಟನ್ ಅಡಿಕೆ ಆಮದು ಮಾಡಿಕೊಂಡಿದ್ದ ವೇಳೆ, ಕೊಲ್ಕತ್ತಾ ಬಂದರಿನಲ್ಲಿ ಕಸ್ಟಮ್ಸ್ ವಶಪಡಿಸಿಕೊಂಡು ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೇಂದ್ರ ಸರಕಾರದ ಪ್ರಭಾವ ಬಳಸಿದ ಹಿನ್ನೆಲೆಯಲ್ಲಿ ಆ ಅಡಿಕೆಯನ್ನು ತೆರಿಗೆ ರಹಿತವಾಗಿ ಬಿಡಿಸಿಕೊಳ್ಳಲಾಗಿತ್ತು. ಇದು ದ.ಕ. ಸೇರಿದಂತೆ ರಾಜ್ಯಾದ್ಯಂತ ಅಡಿಕೆ ಧಾರಣೆ ನೆಲ ಕಚ್ಚಲು ಪ್ರಮುಖ ಕಾರಣವಾಗಿದೆ ಎಂದು ಸಚಿನ್ ಮಿಗಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News