×
Ad

ಪುತ್ತೂರು: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2016-06-27 21:40 IST

ಪುತ್ತೂರು, ಜೂ.27: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಅಡಿಕೆ, ತೆಂಗು ಮತ್ತು ರಬ್ಬರ್‌ನಂತಹ ಉತ್ಪಾದನೆಗಳ ಬೆಲೆ ಪಾತಾಳಕ್ಕೆ ಇಳಿದಿದೆ. ಮದುವೆ ಆಗಿಯೂ ಕೌಟುಂಬಿಕ ಬದುಕಿನ ಬಗ್ಗೆ ಅರಿವಿಲ್ಲದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನೆಯೊಳಗಿನ ವಿಷಯ ತಿಳಿಯುತ್ತಿಲ್ಲ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ವ್ಯಂಗ್ಯವಾಡಿದರು.

ಅವರು ಪುತ್ತೂರು ಮತ್ತು ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೃಷಿ ಉತ್ಪನ್ನಗಳ ಬೆಲೆ ಇಳಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪುತ್ತೂರಿನ ಬಸ್ಸು ನಿಲ್ದಾಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

 ಹೊರದೇಶಗಳಿಂದ ಸರಾಗವಾಗಿ ಕೃಷಿ ಉತ್ಪನ್ನಗಳು ಆಮದು ಆಗುತ್ತಿರುವ ಕಾರಣ ದೇಶಿಯ ಬೆಳೆಗಳಿಗೆ ಬೇಡಿಕೆ ಕುಸಿಯುತ್ತಿದೆ. ಆಮದು ಉತ್ಪನ್ನಗಳಿಗೆ ಕಡಿವಾಣ ಹಾಕದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಶಾಸಕಿ ಶಕುಂತಳಾ ಶೆಟ್ಟಿ ಎಚ್ಚರಿಸಿದರು.

ಪ್ರಧಾನಿ ನರೇಂದ್ರ ಮೋದಿಗೆ ಬಡವರ ಸಮಸ್ಯೆ ಅರ್ಥವಾಗುತ್ತಿಲ್ಲ. ಕರಾವಳಿ ಬುದ್ಧಿವಂತರ ಜಿಲ್ಲೆಯಾದ ಕಾರಣಕ್ಕೆ ವಾಣಿಜ್ಯ ಬೆಳೆಗಳನ್ನು ಬೆಳೆದು, ಜೀವನ ನಡೆಸುತ್ತಾರೆ. ಇದೀಗ ವಾಣಿಜ್ಯ ಕೃಷಿಗಳ ಬೆಲೆ ಕಡಿಮೆಯಾದ್ದರಿಂದ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಈ ನಡುವೆ ಪ್ರಧಾನಿ ವಿದೇಶಗಳಿಗೆ ತೆರಳಿ ಬಂಡವಾಳ ತರುವ ಕಾಯಕವನ್ನು ಇದೇ ರೀತಿ ಮುಂದುವರಿಸಿದರೆ, ಇನ್ನೊಮ್ಮೆ ಕ್ವಿಟ್ ಇಂಡಿಯಾ ಚಳವಳಿ ನಡೆಸಬೇಕಾದೀತು ಎಂದರು.

ಇಂದು ಬಡವರು ಬದುಕುತ್ತಿದ್ದಾರೆ ಅಂದರೆ ಅದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮಗಳು ಕಾರಣ. ಕೇಂದ್ರದ ಬಿಜೆಪಿ ಕೈಗೊಂಡ ಕ್ರಮದಿಂದ ಬಡವರ ಬವಣೆ ತೀರಿಲ್ಲ. ವಿಜ್ ಮಲ್ಯರಿಗೆ 9 ಸಾವಿರ ಕೋಟಿ ರೂ. ಸಾಲ ನೀಡುವ ಸರಕಾರ, ಬಡ ರೈತರ ಪರ ಆಲೋಚನೆಯೇ ಮಾಡುವುದಿಲ್ಲ. ಹಾಗಿದ್ದೂ ವಿಜಯ್ ಮಲ್ಯರಂತವರಿಗೆ ಕೇಂದ್ರ ಸರಕಾರ ರಾಜಮಣೆ ಹಾಕುತ್ತದೆ. ಕಿವಿಕೇಳದ, ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ರಾಜ್ಯ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಮಾತನಾಡಿ, 40 ಸಾವಿರ ಟನ್ ಅಡಿಕೆಯನ್ನು ಇತ್ತೀಚೆಗಷ್ಟೇ ಕೇಂದ್ರ ಸರಕಾರ ನ್ಯಾಯಾಲಯದಿಂದ ಬಿಡುಗಡೆ ಮಾಡಿದೆ. ಇಷ್ಟು ಪ್ರಮಾಣದ ಅಡಿಕೆ ಉದ್ಯಮಿಗಳ ಪಾಲಾಗಲಿದೆ. ವಿದೇಶಗಳಿಂದ ಇದೇ ರೀತಿ ಶಿಪ್‌ಗಳಲ್ಲಿ ಬರುವ ಕೃಷಿ ಉತ್ಪನ್ನಗಳಿಂದಾಗಿ ದೇಶಿಯ ಬೆಳೆಗೆ ಬೇಡಿಕೆ ಕುಸಿಯುತ್ತಿದೆ. ಕೃಷಿಕರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಆದ್ದರಿಂದ ಕೃಷಿಕರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಝಲ್ ರಹೀಂ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಷದ್ ದರ್ಬೆ, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪಕ್ಷದ ಮುಖಂಡರಾದ ಅಮಳ ರಾಮಚಂದ್ರ, ಜೋಹರಾ ನಿಸಾರ್, ಕೃಷ್ಣಪ್ರಸಾದ್ ಆಳ್ವ, ಸೂತ್ರಬೆಟ್ಟು ಜಗನ್ನಾಥ ರೈ, ಮಹೇಶ್ ಪ್ರಸಾದ್ ಅಂಕೊತ್ತಿಮಾರ್, ಜೋಕಿಂ ಡಿಸೋಜಾ, ಎ.ಕೆ.ಜಯರಾಂ ರೈ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಗೆ ಮೊದಲು ನಗರದ ಅರುಣಾ ಚಿತ್ರ ಮಂದಿರದ ಬಳಿಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಮರವಣಿಗೆಯಲ್ಲಿ ಆಗಮಿಸಿ ಬಸ್ಸು ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಮೆರವಣಿಗೆಯಲ್ಲಿ ಮಿನಿವಿಧಾನ ಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News