ಶಾಲಾ ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ: ಜೆ.ಆರ್.ಲೋಬೊ
ಮಂಗಳೂರು,ಜೂ.27:ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಶಾಲಾ ಮಕ್ಕಳ ಸಾಗಾಟದ ಬಗ್ಗೆ ವಾಹನ ಚಾಲಕ, ಮಾಲಕರ ಸಭೆಯಲ್ಲಿ ಶಾಸಕ ಜೆ.ಆರ್.ಲೋಬೊ ಕರೆ ನೀಡಿದರು.
ಅವರು ಇಂದು ನಗರದ ರೋಶನಿ ನಿಲಯ ಸಭಾಂಗಣದಲ್ಲಿ ನಡೆದ ಶಾಲಾ ಮಕ್ಕಳ ವಾಹನ ಚಾಲಕ, ಮಾಲಕರು, ಶಾಲಾಡಳಿತ ಮಂಡಳಿ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎಲ್ಲವನ್ನು ಸುತ್ತೋಲೆ, ಕಾನೂನಿನ ಮೂಲಕವೇ ಬದಲಾಯಿಸಲು ಸಾಧ್ಯವಿಲ್ಲ. ಪೋಷಕರ, ಚಾಲಕರ ಶಾಲಾಡಳಿತ ಮಂಡಳಿಯ ಸದಸ್ಯರು ಎಲ್ಲರ ಸಹಕಾರದಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಮಾನವೀಯ ನೆಲೆಯಲ್ಲಿ ಕೆಲವೊಮ್ಮೆ ಮಕ್ಕಳ ವಾಹನಗಳಿಗೆ ವಿನಾಯಿತಿ ದೊರೆತರೂ ಮಕ್ಕಳ ಹಿತದೃಷ್ಟಿಯಿಂದ ಈ ಅವಕಾಶ ನೀಡಲಾಗಿದೆ ಹೊರತು, ಅದರಿಂದ ಮಕ್ಕಳ ಬದುಕಿಗೆ ತೊಂದರೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾದಾಗ ಅನಿವಾರ್ಯವಾಗಿ ಕಾನೂನಿನ ನಿಯಂತ್ರಣ ಬೇಕಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ನಗರದಲ್ಲಿ ಶಾಲಾ ವಾಹನಗಳ ಭರಾಟೆ ತಗ್ಗಿಸಲು ಶಾಲಾ ಸಮಯವನ್ನು ವ್ಯತ್ಯಾಸಗೊಳಿಸುವುದು ಉತ್ತಮ ಎಂದು ಮೇಯರ್ ಹರಿನಾಥ್ ಸಲಹೆ ನೀಡಿದರು.ಒಂದೆ ಸಮಯದಲ್ಲಿ ಶಾಲೆಗಳು ಆರಂಭಗೊಂಡಾಗ ಮತ್ತು ಬಿಡುವಾಗ ಹೆಚ್ಚಿನ ಒತ್ತಡ ಉಂಟಾಗುತ್ತದೆ.ಈ ರೀತಿಯ ವಾಹನದಟ್ಟಣೆಯಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಕಡೆ ಬೆಳಗಿನ ಜಾವ ಬೇಗನೆ ಶಾಲೆ ಆರಂಭಗೊಂಡಾಗ ಅವಸರವಾಗಿ ಮಕ್ಕಳನ್ನು ಸಾಗಿಸುವುದರಿಂದಲೂ ಅಪಘಾತ ಹೆಚ್ಚಾಗುವ ಸಾಧ್ಯತೆ ಈ ಬಗ್ಗೆ ಗಮನ ಹರಿಸಬೇಕಾಗಿದೆ. ನಗರದ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೂ ವೇಗದ ಮಿತಿಯನ್ನು ಕಡ್ಡಾಯಗೊಳಿಸಬೇಕು ಎಂದು ಮೇಯರ್ ಹರಿನಾಥ್ ತಿಳಿಸಿದರು.
ಸಂಚಾರ ನಿಯಮದ ಪಾಲನೆಯನ್ನು ಮುರಿಯುವುದರಿಂದ ಅಪಘಾತ ಹೆಚ್ಚುತ್ತಿದೆ
ಬಹುತೇಕ ಅಪಘಾತಗಳ ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸದೆ ಇರುವುದರಿಂದಲೇ ನಡೆಯುತ್ತಿರುವುದು ಕಂಡು ಬಂದಿದೆ. ವೇಗದ ಮಿತಿಯನ್ನು ಕಡಿತಗೊಳಿಸಿದಾಗ ಅಪಘಾತದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಪ್ರಭಾರ ಆರ್‌ಟಿಒ ಜಿ.ಎಸ್.ಹೆಗ್ಡೆ ತಿಳಿಸಿದರು.
30ರಿಂದ 40 ಕಿಲೋಮೀಟರ್ ವೇಗದಲ್ಲಿ ಸಾಗುವ ವಾಹನಗಳು ಅಪಘಾತಕ್ಕೆ ಈಡಾಗುವ ಸಂಭವ ಕಡಿಮೆ ಇರುತ್ತದೆ. ಶಾಲಾಡಳಿತ ಮಂಡಳಿಗಳು ತಮ್ಮ ಶಾಲೆಗಳಿಗೆ ಮಕ್ಕಳ ಸಾಗಾಟಕ್ಕೆ ತಮ್ಮ ಶಾಲೆಯ ವತಿಯಿಂದಲೇ ವಾಹನ ಬಳಸುವುದು. ಈ ವಾಹನಕ್ಕೆ ಜಿಪಿಎಸ್ ಅಳವಡಿಸಿದಾಗ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇನ್ನಷ್ಟು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಯಾವುದೇ ಖಾಸಗಿ ಬಸ್‌ಗಳಿಗೆ ಪರವಾನಿಗೆ ನೀಡಲಾಗುವುದಿಲ್ಲ ಕೆಎಸ್ಸಾರ್ಟಿಸಿ ಬಸ್ಸುಗಳು ನಗರದಲ್ಲಿ ಸಂಚರಿಸಲಿದೆ. ಇದರಿಂದ ಶಾಲಾ ಮಕ್ಕಳ ಸಾಗಾಟದ ಸಮಸ್ಯೆ ಬಗೆಹರಿಯಲಿದೆ ಎಂದು ಜಿ.ಎಸ್.ಹೆಗ್ಡೆ ತಿಳಿಸಿದರು.
ಸ್ಕೂಲ್ ಕ್ಯಾಬ್‌ಗಳ ಮೂಲಕ ಶಾಲಾ ಮಕ್ಕಳ ಸಾಗಾಟ ಮಾಡುವುದು ಸೂಕ್ತ. ಈ ರೀತಿಯ ವಾಹನ ಖರೀದಿಗೂ ಸರಕಾರ ತೆರಿಗೆ ವಿನಾಯಿತಿ ನೀಡುತ್ತಿದೆ. ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಹಳದಿ ಬಣ್ಣ ಬಳಿಯುವುದು ಕಡ್ಡಾಯವಾಗಿದೆ ಎಂದು ಜಿ.ಎಸ್.ಹೆಗ್ಡೆ ತಿಳಿಸಿದರು.
ಸಮಾರಂಭದಲ್ಲಿ ಎಸಿಪಿ ಉದಯ ನಾಯಕ್ ಶಾಲಾ ಮಕ್ಕಳು ದುರಂತಕ್ಕೀಡಾಗುವುದನ್ನು ತಪ್ಪಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳಿಂದ ಕೆಲವರಿಗೆ ತೊಂದರೆಯಾದರೂ ಅನಿವಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್, ರಾಜಲಕ್ಷ್ಮೀ, ಟ್ರಾಫಿಕ್ ಇನ್ಸ್‌ಪೆಕ್ಟರ್‌ಗಳಾದ ಮೋಹನ್ ಪೂಜಾರಿ, ಸುರೇಶ್, ದ.ಕ ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ನೆಲ್ಸನ್ ಪಿರೇರಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್, ಟಿ.ಕೆ.ಸುಧೀರ್, ಸಿಪಿಐ ಮುಖಂಡ ಸುನಿಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.