×
Ad

ಮಂಗಳೂರು: ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ: ಸೊತ್ತು ವಶಕ್ಕೆ

Update: 2016-06-27 23:33 IST

ಮಂಗಳೂರು, ಜೂ. 27: ಜೋಕಟ್ಟೆ ಹೋಗುವ ರಸ್ತೆಯ ತಿರುವುನಲ್ಲಿ ಸಾರ್ವಜನಿಕರನ್ನು ದೋಚಲು ಹೊಂಚು ಹಾಕುತ್ತಿದ್ದ ಐವರನ್ನು ಪಣಂಬೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಂಜಿನಮೊಗರು ನಿವಾಸಿಗಳಾದ ಪ್ರವೀಣ್ ಅನಿಲ್ ಮೊಂತೆರೋ(21), ಬಿಜಿನ್ (19), ಮಾರ್ವಿನ್ ಯಾನೆ ಮಾವಿನ್ (19), ಮುಸ್ತಫಾ (15) ಹಾಗೂ ಕೂಳೂರಿನ ನಿವಾಸಿ ಅನೀಶ್ ಶೆಟ್ಟಿ(16) ಎಂದು ಗುರುತಿಸಲಾಗಿದೆ.

 ತಂಡವು ಹೊರ ರಾಜ್ಯದಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡಲು ಬಂದ ಕಾರ್ಮಿಕರು ಬೆಳಗ್ಗಿನ ಜಾವ ಪೇಟೆಗೆ ಮತ್ತು ಊರಿಗೆ ಹಣ ತೆಗೆದುಕೊಂಡು ಹೋಗುವವರನ್ನು ಹಾಗೂ ವಾಹನದಲ್ಲಿ ಸಂಚರಿಸುವ ಶ್ರೀಮಂತ ವ್ಯಕ್ತಿಗಳನ್ನು ಒಮ್ಮೆಲೆ ರಸ್ತೆಯಲ್ಲಿ ಅಡ್ಡಹಾಕಿ ತಲವಾರು ತೋರಿಸಿ, ಮೆಣಸಿನ ಹುಡಿಯನ್ನು ಕಣ್ಣಿಗೆ ಎರಚಿ ಅವರುಗಳಿಂದ ಹಣ ಬೆಲೆಬಾಳುವ ಚಿನ್ನಾಭರಣ, ಮೊಬೈಲ್ ಫೋನ್‌ಗಳನ್ನು ದರೋಡೆಗೈದಿದ್ದು, ರವಿವಾರವೂ ಈ ತಂಡ ರಾಷ್ಟ್ರೀಯ ಹೆದ್ದಾರಿ 66ರಿಂದ ಜೋಕಟ್ಟೆ ಹೋಗುವ ರಸ್ತೆಯ ತಿರುವುನಲ್ಲಿ ದರೋಡೆಗೆ ಹೊಂಚು ಹೊಂಚು ಹಾಕಿ ಕಾದು ಕುಳಿತಿತ್ತು ಎಂದು ಹೇಳಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ., ಠಾಣಾ ಪಿಎಸ್‌ಐ ಸತೀಶ್ ಎಂ.ಪಿ., ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಎರಡು ಮೋಟಾರು ಸೈಕಲ್, ಎರಡು ತಲುವಾರು, ಒಂದು ಪಂಚ್, ಮೂರು ಮೊಬೈಲ್ ಒಂದು ರೋಪ್ ಹಾಗೂ ಒಂದು ಪ್ಯಾಕೇಟ್ ಮೆಣಸಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳೊಂದಿಗೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 55,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಪಣಂಬೂರು ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News