×
Ad

ತಾಪಂ ಶಾಸನಬದ್ಧ ಅನುದಾನ 5 ಕೋ.ರೂ.ಗೆ ಹೆಚ್ಚಿಸಲು ಆಗ್ರಹ

Update: 2016-06-27 23:55 IST

ಉಡುಪಿ, ಜೂ.27: ತಾಲೂಕು ಪಂಚಾಯತ್‌ಗಳಿಗೆ ರಾಜ್ಯ ಸರಕಾರ ನೀಡುವ ಶಾಸನಬದ್ಧ ಅನುದಾನವನ್ನು ಒಂದು ಕೋಟಿ ರೂ.ನಿಂದ ಐದು ಕೋಟಿ ರೂ.ಗೆ ಏರಿಕೆ ಮಾಡುವಂತೆ ಇಂದು ನಡೆದ ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಲಾಯಿತು.

ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಧನಂಜಯ್, ಕಾರ್ಕಳದ 19 ಸದಸ್ಯ ಬಲದ ತಾಪಂಗೂ ಒಂದು ಕೋಟಿ ರೂ. ಅನುದಾನ, 41 ಸದಸ್ಯರು ಇರುವ ಉಡುಪಿ ತಾಪಂಗೂ ಅಷ್ಟೇ ಅನುದಾನ ಬರುತ್ತಿದ್ದು, ಇದನ್ನು ವಿಂಗಡನೆ ಮಾಡುವಾಗ ಸದಸ್ಯರಿಗೆ ಸಾಕಷ್ಟು ಕಡಿಮೆ ಮೊತ್ತದ ಅನುದಾನ ದೊರೆಯು ತ್ತಿದೆ. ಆದ್ದರಿಂದ ಈ ಅನುದಾನವನ್ನು ಸರಕಾರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇದಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರಕಾರ ಶಾಸನಬದ್ಧ ಹೆಚ್ಚುವರಿ ಅನುದಾನವನ್ನು ಜಿಪಂಗೆ ಎರಡು ಕೋಟಿ ಹಾಗೂ ತಾಪಂಗೆ ಒಂದು ಕೋಟಿ ರೂ. ನೀಡುತ್ತಿದೆ. ಈ ಅನುದಾನವನ್ನು ಹೆಚ್ಚಿಸುವಂತೆ ಈಗಾಗಲೇ ಸದನದಲ್ಲಿ ಸರಕಾರದ ಮುಂದೆ ಪ್ರಸ್ತಾಪಿಸಲಾಗಿದೆ. ತಾಪಂಗೆ ಈಗ ನೀಡುವ ಒಂದು ಕೋಟಿ ಅನುದಾನವನ್ನು ಎರಡು ಕೋಟಿಗೆ ಹೆಚ್ಚಿಸುವ ಭರವಸೆ ದೊರೆತಿದೆ ಎಂದರು.

ಈ ಅನುದಾನ ವಿನಿಯೋಗಿಸುವ ಕುರಿತ ಅನಿರ್ಬಂಧಿತ ನಿಯಮ ಗಳನ್ನು ತೆಗೆದು ಹಾಕುವಂತೆ ಡಾ.ಸುನೀತಾ ಶೆಟ್ಟಿ ಒತ್ತಾಯಿಸಿದರು. ಉಡುಪಿ ತಾಪಂಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಮಾಡಬೇಕಾದ ಬದಲಾವಣೆ ಬಗ್ಗೆ ಪಟ್ಟಿ ಮಾಡಿ ನೀಡಿದರೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
 

ಪಿಡಿಒ ಕೊರತೆ ಬಗ್ಗೆ ಚರ್ಚೆ
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎರಡೆರಡು ಪಂಚಾಯತ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಶಿರ್ವ ಗ್ರಾಪಂನ ಪಿಡಿಒ ಹೆಜಮಾಡಿ ಗ್ರಾಪಂನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಶಿರ್ವ ಗ್ರಾಪಂನ ಕೆಲಸ ಬಾಕಿ ಉಳಿದಿವೆ. ಆದುದರಿಂದ ಶಿರ್ವ ಗ್ರಾಪಂಗೆ ಪಿಡಿಒ ಹಾಗೂ ಗ್ರಾಮ ಕರಣಿಕರನ್ನು ನೇಮಕ ಮಾಡುವಂತೆ ಗೀತಾ ವಾಗ್ಳೆ ಹೇಳಿದರು. ಪಿಡಿಒಗಳು ಆಯಾ ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುವ ದಿನಾಂಕದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಡಾ.ಸುನೀತಾ ಶೆಟ್ಟಿ ತಿಳಿಸಿದರು.

ಮಳೆಯಿಂದಾಗಿ ಫಲಿಮಾರು ಗ್ರಂಥಾಲಯ ಕಟ್ಟಡ ಕುಸಿದು ಬಿದ್ದಿದ್ದು, ಹೊಸ ಕಟ್ಟಡ ನಿರ್ಮಿಸಲು ಬೇಕಾದ ಅನುದಾನ ಒದಗಿಸಬೇಕೆಂದು ಸ್ಥಳೀಯ ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು. ಮಳೆಗಾಲ ಬಂದರೂ ಅಪಾಯಕಾರಿ ಮರಗಳನ್ನು ತೆರವುಗೊಳಿಸದ ಗ್ರಾಪಂಗಳ ಕ್ರಮದ ಬಗ್ಗೆ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಲಕ್ಷ್ಮೀನಾರಾಯಣ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.

ದಿನಕರ ಹೆರೂರು ಮಾತನಾಡಿ, ಉಚಿತ ವಿದ್ಯುತ್ ಸಂಪರ್ಕ ಒದಗಿಸುವ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ದೂರಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿಯ ದೂಪದಕಟ್ಟೆ ಎಂಬಲ್ಲಿರುವ ಸರಕಾರಿ ಜಾಗದಲ್ಲಿ ಸಾಕಷ್ಟು ಸಂಖ್ಯೆಯ ವಲಸೆ ಕಾರ್ಮಿಕರು ಬೇಕಾಬಿಟ್ಟಿಯಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸ ಮಾಡಿಕೊಂಡಿದ್ದಾರೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ವಸಂತಿ ಪೂಜಾರಿ ಆರೋಪಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡುವಂತೆ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದ ಬಗ್ಗೆ ಸ್ಥಳೀಯ ಸದಸ್ಯ ಮೈಕಲ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪಿಡಿಒ ಅವರಿಂದ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುವುದಾಗಿ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಹೇಳಿದರು. ಉಚ್ಚಿಲದಲ್ಲಿ ಸರ್ವಿಸ್ ರಸ್ತೆ ಇಲ್ಲದ ಪರಿಣಾಮ ರಾ.ಹೆ.ಯಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳ್ಳಬೇಕು ಎಂದು ಶೇಖಬ್ಬ ಉಚ್ಚಿಲ ಒತ್ತಾಯಿಸಿದರು.

ಸಭೆಯಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಉಪಸ್ಥಿತರಿದ್ದರು.


ಗ್ರಾಪಂಗಳ ಅನುದಾನ ಬಿಡುಗಡೆಯಾಗಲಿ

ಕೆಲವು ಗ್ರಾಪಂಗಳಿಗೆ ಶಾಸನಬದ್ಧ 10 ಲಕ್ಷ ರೂ. ಅನುದಾನದಲ್ಲಿ ಕೇವಲ 6 ಲಕ್ಷ ರೂ. ಮಾತ್ರ ಬಿಡುಗಡೆಗೊಂಡಿದ್ದು, ಉಳಿದ 6 ಲಕ್ಷ ಬಾಕಿ ಇರಿಸಲಾಗಿದೆ. ಇದರಿಂದ ಆಯಾ ಗ್ರಾಪಂನವರು ಕ್ರಿಯಾ ಯೋಜನೆ ತಯಾರಿಸಲು ಅಡ್ಡಿಯಾಗುತ್ತಿದೆ ಎಂದು ಸುಧೀರ್ ಕುಮಾರ್ ಶೆಟ್ಟಿ ದೂರಿದರು. ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಸರಕಾರ ಕಂತುಗಳಲ್ಲಿ ಈ ಅನುದಾನವನ್ನು ಬಿಡುಗಡೆ ಮಾಡುತ್ತದೆ ಎಂದರು. ತಾಲೂಕಿನಲ್ಲಿ ಕಳೆ ಮಾರ್ಚ್‌ವರೆಗೆ ಪೂರ್ಣ ಅನುದಾನ ಬಾರದ ಗ್ರಾಪಂಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಪಂಚಾಯತ್‌ಗಳ ಎಸ್ಕ್ರೋ ಖಾತೆಯಲ್ಲಿ ವಿದ್ಯುತ್ ಬಿಲ್ ಬಾಕಿ ಇಲ್ಲದಿದ್ದರೂ ತಡೆಹಿಡಿ ಯಲಾಗಿರುವ ಗ್ರಾಪಂಗಳ ಹಣ ಕೂಡಲೇ ಬಿಡುಗಡೆ ಮಾಡುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News