ಶಾಲಾ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಉಡುಪಿ, ಜೂ.27: ನಗರದ ಬೀಡಿನಗುಡ್ಡೆಯಿಂದ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯಲ್ಲಿ ಸೊಮವಾರ ಬೆಳಗ್ಗೆ 7:40ಕ್ಕೆ ಎರಡು ಶಾಲಾ ಬಸ್ ಗಳು ಮುಖಾಮುಖಿ ಢಿಕ್ಕಿ ಯಾಗುವ ಸಂಭವವು ಚಾಲಕರ ಸಮಯ ಪ್ರಜ್ಞೆಯಿಂದ ತಪ್ಪಿದೆ.
ಶಾರದಾ ಕಲ್ಯಾಣಮಂಟಪದ ರಸ್ತೆಯಾಗಿ ಬೀಡಿನಗುಡ್ಡೆ ಕಡೆ ಮಕ್ಕಳನ್ನು ಕರೆದುಕೊಂಡು ಹೋಗಲು ಬರುತ್ತಿದ್ದ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ನ ಖಾಲಿ ಬಸ್ ಬೀಡಿನಗುಡ್ಡೆ ಕಡೆಯಿಂದ ಮಕ್ಕಳನ್ನು ಶಾಲೆಗೆ ಕರೆದು ಕೊಂಡು ಹೋಗುತ್ತಿದ್ದ ಬ್ರಹ್ಮಾವರ ಲಿಟ್ಲ್ರಾಕ್ ಶಾಲೆಯ ಬಸ್ ಆ ರಸ್ತೆಯಲ್ಲಿರುವ ನೀರು ಹರಿದು ಹೋಗುವ ಕಿರುಸೇತುವೆಯ ಬಳಿ ಮುಖಾಮುಖಿಯಾದವು. ಎರಡು ಬದಿಯಲ್ಲಿರುವ ಗದ್ದೆಯಿಂದ ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ಅಪಾಯವನ್ನು ಅರಿತ ಟ್ರಿನಿಟಿ ಬಸ್ನ ಚಾಲಕ ಕೂಡಲೇ ಮಕ್ಕಳು ತುಂಬಿದ ಲಿಟ್ಲ್ರಾಕ್ ಬಸ್ ಸಾಗಲು ತನ್ನ ಬಸ್ಸನ್ನು ರಸ್ತೆಯ ಕೆಳಗೆ ಇಳಿಸಿದರು. ಇದರಿಂದ ಲಿಟ್ಲ್ರಾಕ್ನ ಬಸ್ ಯಾವುದೇ ಅಪಾಯವಿಲ್ಲದೆ ಸೇತುವೆಯಲ್ಲಿ ಮುಂದೆ ಸಾಗಿತು. ರಸ್ತೆಯಿಂದ ಕೆಳಗೆ ಇಳಿದಿದ್ದ ಟ್ರಿನಿಟಿ ಶಾಲೆಯ ಬಸ್ ಮಣ್ಣಿನ ರಸ್ತೆಯಲ್ಲಿ ಹೂತು ಅಲ್ಲೇ ನಿಂತಿತು. ಇದರಿಂದ ಅನಾಹುತವೊಂದು ತಪ್ಪಿದಂತಾಯಿತು. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.