ಬ್ರೆಕ್ಸಿಟ್ ಪರಿಣಾಮ: ಜನಾಂಗೀಯ ನಿಂದನೆ, ದ್ವೇಷ, ಅಪರಾಧ ಭಾರೀ ಹೆಚ್ಚಳ
ಲಂಡನ್, ಜೂ.28: ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ನಿರ್ಧಾರ ಕೈಗೊಂಡ ಕೆಲವೇ ದಿನಗಳಲ್ಲಿ ಜನಾಂಗೀಯ ನಿಂದನೆ ಘಟನೆಗಳು ವ್ಯಾಪಕವಾಗಿ ಹೆಚ್ಚಿವೆ. ಪೋಲಂಡ್ ನಾಗರಿಕರ ಮನೆಗಳ ಮುಂದೆ ಯೂರೋಪಿಯನ್ ಒಕ್ಕೂಟದಿಂದ ತೊಲಗಿ ಎಂಬ ಫಲಕಗಳನ್ನು ಹಾಕುವುದರಿಂದ ಹಿಡಿದು, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವ ಕೃತ್ಯಗಳು ಕೂಡಾ ಹೆಚ್ಚಿವೆ. ವಲಸೆಗಾರರ ವಿರುದ್ಧ ಅವಹೇಳನಕಾರಿ ಬ್ಯಾನರ್‌ಗಳನ್ನೂ ಪ್ರದರ್ಶಿಸಲಾಗುತ್ತಿದೆ.
ಜೂನ್ 23ರ ಐತಿಹಾಸಿಕ ಜನಮತಗಣನೆಯಲ್ಲಿ ಬ್ರಿಟನ್ ಜನತೆ ಕೈಗೊಂಡ ನಿರ್ಧಾರದಿಂದ ಉಂಟಾಗಿರುವ ರಾಜಕೀಯ ಹಾಗೂ ಆರ್ಥಿಕ ತಲ್ಲಣ ಸೃಷ್ಟಿಯಾಗಿದೆ. ಯೂರೋಪಿಯನ್ ಒಕ್ಕೂಟ ಬಿಡುವಂತೆ ಜನ ಮತ ಹಾಕಲು ಆರ್ಥಿಕ ಕಾರಣಕ್ಕಿಂತ ಹೆಚ್ಚಾಗಿ ಸಮೂಹಸನ್ನಿ ಕಾರಣ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಲಸೆಗಾರರ ನಿಂದನೆಯಂಥ ಕೃತ್ಯಗಳಲ್ಲಿ ತೊಡಗದಂತೆ ಪ್ರಧಾನಿ ಡೇವಿಡ್ ಕೆಮರೂನ್ ಹಾಗೂ ಲಂಡನ್ ಮೇಯರ್ ಸಿದ್ದೀಕ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಅಸಹಿಷ್ಣುತೆಯನ್ನು ಸರಕಾರ ಸಹಿಸುವುದಿಲ್ಲ. ಬ್ರಿಟನ್‌ನಲ್ಲಿರುವ ಎಲ್ಲ ಸಮುದಾಯಗಳ ಜನರಿಗೆ ಮರು ಭರವಸೆ ನೀಡುವ ಅಗತ್ಯವಿದೆ. ನಮ್ಮದು ಸಹಿಷ್ಣು ರಾಷ್ಟ್ರ. ನಾವು ಯೂರೋಪಿಯನ್ ಯೂನಿಯನ್‌ಗೆ ಸೇರುವ ಬಹಳಷ್ಟು ಮುನ್ನವೇ ನಮ್ಮ ಅಸ್ತಿತ್ವ ಇತ್ತು. ನಮ್ಮ ಇತಿಹಾಸವನ್ನು ನಾವು ಹೀಗೆ ಅರ್ಥೈಸಿಕೊಳ್ಳಬೇಕು ಎಂದು ಪ್ರಧಾನಿ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಜನಾಂಗೀಯ ನಿಂದನೆಯಂಥ ಕೃತ್ಯಗಳ ಬಗ್ಗೆ ಪೊಲೀಸರು ಹೆಚ್ಚು ಜಾಗರೂಕರಾಗಿರಬೇಕು ಎಂದು ಲಂಡನ್ ಮೇಯರ್ ಖಾನ್ ಸೂಚಿಸಿದ್ದಾರೆ.