ಯುದ್ಧದ ಮೂಲಕ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ
ಇಸ್ಲಾಮಾಬಾದ್, ಜೂ.28: ಕಾಶ್ಮೀರವನ್ನು ಯುದ್ಧದಲ್ಲಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಹೇಳಿದ್ದಾರೆ.
ಭಾರತದೊಂದಿಗೆ ಪರಸ್ಪರ ನಂಬಿಕೆಯ ಕ್ರಮಗಳಿಂದ ಮಾತ್ರವೇ ಕಾಶ್ಮೀರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಜಿಯೊ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಯುದ್ಧದಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಆಗುವುದಿಲ್ಲವಾದರೆ ನಮ್ಮ ಮುಂದೆ ಭಾರತದೊಂದಿಗೆ ಚರ್ಚೆ ನಡೆಸುವುದು ಮಾತ್ರ ಉಳಿಯುತ್ತದೆ. ಪರಸ್ಪರ ನಂಬಿಕೆಯ ನೆಲೆಯಲ್ಲಿ ಮಾತ್ರ ನಡೆಯಲು ಚರ್ಚೆಗಳು ನಡೆಯಲು ಸಾಧ್ಯ ಎಂದು ರಬ್ಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಪೀಪಲ್ಸ್ ಪಾರ್ಟಿ ಸರಕಾರವಿದ್ದಾಗ ಭಾರತದೊಂದಿಗೆ ಸಾಮಾನ್ಯ ರೀತಿಯ ಸಂಬಂಧವಿತ್ತು. ವೀಸಾ ನಿಯಮಗಳಲ್ಲಿ ರಿಯಾಯಿತಿ ಮುಂತಾದವುಗಳು ಇದಕ್ಕೆ ಕಾರಣವಾಗಿತ್ತು ಎಂದು ಅವರು ಹೇಳಿದ್ದಾರೆ.
2011ರಿಂದ 2013ರವರೆಗೆ ಹಿನಾ ರಬ್ಬಾನಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಪಾಕಿಸ್ತಾನದ ವಿದೇಶ ವ್ಯವಹಾರಗಳಲ್ಲಿ ಸೇನೆ ಹಸ್ತಕ್ಷೇಪ ನಡೆಸುತ್ತಿದೆಯಲ್ಲವೇ ಎಂದು ಅವರನ್ನು ಕೇಳಿದಾಗ ಅದು ಸಹಜ ಪ್ರಕ್ರಿಯೆಯಾಗಿದೆ ಎಂದು ಉತ್ತರಿಸಿದ್ದಾರೆ. ಭಾರತ ಅಮೆರಿಕದೊಂದಿಗೆ ಹೆಚ್ಚು ನಿಕಟವಾಗುತ್ತಿದೆಯಲ್ಲವೇ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಅದಕ್ಕೆ ಭಾರತವು ಅಣುಶಕ್ತಿ, ಸೈನಿಕ ಶಕ್ತಿ, ಪ್ರಜಾಪ್ರಭುತ್ವ ರಾಷ್ಟ್ರವಾದುದು ಕಾರಣವೆಂದು ಅವರು ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.