ಭಾರೀ ಮಳೆ: ಕಾಸರಗೋಡು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ
ಕಾಸರಗೋಡು, ಜೂ.28: ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ಮಂಗಳವಾರ ತರಗತಿ ಆರಂಭವಾದ ಬಳಿಕ ರಜೆ ಘೋಷಿಸಿದ್ದರಿಂದ ಶಾಲಾ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಗೊಂದಲಕ್ಕೀಡಾದರು.
ಸೋಮವಾರ ಸಂಜೆಯಿಂದ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಮಳೆಗೆ ಒದ್ದೆಯಾಗಿಯೇ ಮಕ್ಕಳು ಶಾಲೆಗೆ ತಲುಪಿದ್ದು, 10 ಗಂಟೆಗೆ ಶಾಲೆ ಆರಂಭಗೊಂಡಿತ್ತು. ಈ ನಡುವೆ 11 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಇ. ದೇವದಾಸನ್ ಶಾಲೆಗಳಿಗೆ ರಜೆ ಘೋಷಿಸಿದರು.
ಶಾಲಾ ಅಧಿಕಾರಿಗಳಿಗೆ ಈ ವಿಷಯ ತಲುಪಲು ಮತ್ತಷ್ಟು ವಿಳಂಬವಾಯಿತು. ತರಗತಿ ಆರಂಭವಾದ ಬಳಿಕ ರಜೆ ಘೋಷಿಸಿದರೂ ಶಾಲಾ ಮುಖ್ಯಸ್ಥರು ಗೊಂದಲಕ್ಕೆ ಸಿಲುಕಿದರು. ಮಧ್ಯಾಹ್ನದೂಟಕ್ಕೆ ಎಲ್ಲಾ ವ್ಯವಸ್ಥೆ ಅಂತಿಮ ಹಂತದಲ್ಲಿದೆ. ಪ್ರತಿ ಶಾಲೆಯ ಸಾವಿರಾರು ಮಕ್ಕಳಿಗೆ ಗಂಜಿಗೆ ಅಕ್ಕಿ ಹಾಕಲಾಗಿತ್ತು. ಇದು ಅಡುಗೆ ತಯಾರಕರಲ್ಲಿ ಗೊಂದಲಕ್ಕೆ ಕಾರಣವಾಯಿತು .
ಇತ್ತ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ತೆರಳಿದ್ದ ಹಲವು ಪೋಷಕರು ದಿಢೀರ್ ರಜೆ ನೀಡಿದ್ದರಿಂದ ಸಮಸ್ಯೆಗೆ ಸಿಲುಕಿದರು. ಬೆಳಗ್ಗೆ ಹತ್ತು ಗಂಟೆಯಿಂದ ಭಾರೀ ಮಳೆ ಸುರಿದ ಪರಿಣಾಮ ರಜೆ ಘೋಷಿಸಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಭಾರಿ ಮಳೆ ಸುರಿದಲ್ಲಿ ಪ್ರವಾಹ ಉಂಟಾಗಲಿದ್ದು, ಇದರಿಂದ ಸಂಜೆ ವಿದ್ಯಾರ್ಥಿಗಳಿಗೆ ಮನೆಗೆ ತೆರಳಲು ಅಸಾಧ್ಯವಾಗಬಹುದು ಎಂದು ಮನಗಂಡು ದಿಢೀರ್ ರಜೆ ಘೋಷಿಸಿದ್ದಾಗಿ ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಿದರು.