ಕಾಸರಗೋಡು: ನಕಲಿ ಮತದಾನಕ್ಕೆ ಕರೆ ಆರೋಪ; ಕಾಂಗ್ರೆಸ್ ಮುಖಂಡ ಕೆ. ಸುಧಾಕರನ್ ವಿರುದ್ಧ ಪ್ರಕರಣ

Update: 2016-06-28 08:41 GMT

ಕಾಸರಗೋಡು, ಜೂ.28: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಕಲಿ ಮತದಾನಕ್ಕೆ ಕರೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಕೆ. ಸುಧಾಕರನ್ ವಿರುದ್ಧ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊಸದುರ್ಗ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದಂತೆ ಕೇಸು ದಾಖಲಿಸಲಾಗಿದೆ. ಸುಧಾಕರನ್ ವಿರುದ್ಧ ಉದುಮ ಶಾಸಕ ಕೆ . ಕುಂಞಿರಾಮನ್ ಸಲ್ಲಿಸಿದ್ದ ದೂರಿನಂತೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ವಿಧಾನಸಭಾ ಚುನಾವಣೆಯಲ್ಲಿ ಉದುಮದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸುಧಾಕರನ್ ನಕಲಿ ಮತದಾನಕ್ಕೆ ಕರೆ ನೀಡಿರುವುದಾಗಿ ದೂರು ನೀಡಲಾಗಿತ್ತು.

ಆದರೆ ಇದು ತನ್ನ ವಿರುದ್ಧದ ರಾಜಕೀಯ ಷಡ್ಯಂತ್ರವಾಗಿದೆ. ಸಿಪಿಎಂ ನಕಲಿ ಮತದಾನಕ್ಕೆ ಯತ್ನಿಸಿದ್ದಲ್ಲಿ ತಡೆಯುವಂತೆ ಕರೆ ನೀಡಿದ್ದು, ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಸುಧಾಕರನ್ ಪ್ರತಿಕ್ರಿಯೆ ನೀಡಿದ್ದಾರೆ.

ಮೇ ತಿಂಗಳಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಉದುಮ ಕ್ಷೇತ್ರದಿಂದ ಕೆ. ಸುಧಾಕರನ್ ಸ್ಪರ್ಧಿಸಿದ್ದರು. ಸಿಪಿಎಂನ ಕೆ.ಕುಂಞಿರಾಮನ್ ವಿರುದ್ಧ ಮೂರು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News