ಚೆಂಬರಿಕ ಖಾಜಿ ನಿಗೂಢ ಸಾವು ಪ್ರಕರಣದ ಮರು ತನಿಖೆಗೆ ಸಿಎಂ ಪಿಣರಾಯಿ ವಿಜಯನ್‌ರಿಗೆ ಮನವಿ
ಕಾಸರಗೋಡು, ಜೂ.28: ಚೆಂಬರಿಕ ಖಾಜಿ ಎಂ. ಅಬ್ದುಲ್ಲ ಮುಸ್ಲಿಯಾರ್ರ ನಿಗೂಢ ಸಾವಿನ ಕುರಿತು ಸಿಬಿಐನ ಉನ್ನತ ಮಟ್ಟದ ತಂಡದಿಂದ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆ ತರುವಂತೆ ಮತ್ತು ಪ್ರಕರಣದ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುರ್ರಝಾಕ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಖಾಜಿಯವರ ನಿಗೂಢ ಸಾವಿನ ಕುರಿತ ರಹಸ್ಯವನ್ನು ಬಯಲಿಗೆ ತರುವಂತೆ ಒತ್ತಾಯಿಸಿ ಖಾಜಿಯವರ ಕುಟುಂಬ ಮತ್ತು ಕ್ರಿಯಾ ಸಮಿತಿ ವತಿಯಿಂದ ಎರಡು ತಿಂಗಳಿನಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಯಿತು.
2010 ರ ಫೆ.15 ರಂದು ಬೇಕಲ ಚೆಂಬರಿಕ ಬಳಿ ಸಮುದ್ರದಲ್ಲಿ ಖಾಜಿಯವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಬೇಕಲ ಪೊಲೀಸರು ಬಳಿಕ ಕ್ರೈ0 ಬ್ರಾಂಚ್ ಬಳಿಕ ಸಿಬಿಐಗೆ ತನಿಖೆಯನ್ನು ಹಸ್ತಾತರಿಸಿದ್ದರೂ ನೈಜ ಕಾರಣ ಇನ್ನೂ ಹೊರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐನ ಹೊಸ ತಂಡದಿಂದ ತನಿಖೆ ನಡೆಸುವಂತೆ ಕುಟುಂಬಸ್ಥರು ಮತ್ತು ಕ್ರಿಯಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೆ ತಿಂಗಳಿಗೆ ಕಾಲಿಟ್ಟಿದೆ.