×
Ad

ವಿಂಬಲ್ಡನ್ ಗೆ ದೇಹ ಪ್ರದರ್ಶನದ ಡ್ರೆಸ್ ನೀಡಿದ ನೈಕ್

Update: 2016-06-28 16:27 IST

ಲಂಡನ್, ಜೂ.28: ವಿಂಬಲ್ಡನ್ ಮಹಿಳಾ ಆಟಗಾರರಿಗೆ ನೈಕ್ ಕಂಪೆನಿ ಸಿದ್ಧ ಪಡಿಸಿದ ಕ್ರೀಡಾ ಉಡುಪು ಹಲವು ಆಟಗಾರ್ತಿಯರ ಅಸಮಾಧಾನಕ್ಕೆ ಕಾರಣವಾಗಿದ್ದು ಈ ‘ಬೇಬಿ ಡಾಲ್’ ಮಾದರಿಯ ದೇಹ ಪ್ರದರ್ಶನದ ಉಡುಪು ಧರಿಸಿ ತಮಗೆ ಆಟದಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗದು ಎಂದು ಹೇಳಿಕೊಂಡಿದ್ದಾರೆ.

ನೈಕ್ ಕಂಪೆನಿಯೊಂದಿಗೆ ತಮಗಾಗಿ ಕ್ರೀಡಾ ಉಡುಪುಗಳನ್ನು ತಯಾರಿಸಲು ಕಾಂಟ್ರಾಕ್ಟ್ ನೀಡಿರುವ ಆಟಗಾರ್ತಿಯರು ಮೂಲ ಮಾದರಿಯಿಂದ ಸ್ವಲ್ಪ ಮಾರ್ಪಾಟು ಮಾಡಲಾದ ಉಡುಪುಗಳನ್ನು ತಮಗೆ ಸಿದ್ಧಪಡಿಸುವಂತೆ ಕೇಳಿಕೊಂಡಿದ್ದಾರೆ.

ವಿಂಬಲ್ಡನ್ ಟೆನಿಸ್ ಪಂದ್ಯಗಳಲ್ಲಿ ಭಾಗವಹಿಸುವ ಕ್ರೀಡಾಳುಗಳ ಉಡುಪುಗಳ ವಿಚಾರದಲ್ಲಿ ಆಯೋಜಕರು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದಾರಾದರೂ ಆಲ್ ಇಂಗ್ಲೆಂಡ್ ಕ್ಲಬ್ ಅಧಿಕಾರಿಗಳು ನೈಕ್ ತಯಾರಿಸಿದ ಈ ಉಡುಪು ಸಂಪೂರ್ಣವಾಗಿ ಬಿಳಿಯಾಗಿರುವ ಕಾರಣ ಅದಕ್ಕೆ ಒಪ್ಪಿಗೆ ನೀಡಿದ್ದರೆನ್ನಲಾಗಿದೆ.

2013 ರ ವಿಂಬಲ್ಡನ್ ರನ್ನರ್-ಅಪ್ ಜರ್ಮನಿಯ ಸಬೀನ್ ಲಿಸಿಕಿ ತಾವು ವಿಜಯ ಗಳಿಸಿದ ಶೆಲ್ಬಿ ರೋಜರ್ಸ್ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಈ ಉಡುಪನ್ನು ಧರಿಸದೆ ಬೇರೊಂದು ಕ್ರೀಡಾ ಉಡುಪು ಧರಿಸಿದ್ದರು. ‘‘ನೈಕ್ ತಯಾರಿಸಿದ ಹೊಸ ಕ್ರೀಡಾ ಉಡುಪನ್ನು ನಾನು ಟ್ರೈ ಮಾಡಿದೆ. ಆದರೆ ಅಷ್ಟೊಂದು ದೇಹ ಪ್ರದರ್ಶನಕ್ಕೆ ಆಸ್ಪದ ನೀಡುವ ಆ ಡ್ರೆಸ್ ಧರಿಸಿ ನನಗೆ ಆರಾಮದಾಯಕವೆನಿಸಲಿಲ್ಲ. ಆಟವಾಡುವಾಗ ನಮ್ಮ ಗಮನ ಬೇರೆ ಎಲ್ಲೂ ಹೋಗಬಾರದಾಗಿರುವುದರಿಂದ ನನಗೆ ಆರಾಮವೆನಿಸಿದ ಡ್ರೆಸ್ಸನ್ನೇ ನಾನು ಆಯ್ದುಕೊಂಡೆ’’ ಎಂದು ಅವರು ಹೇಳುತ್ತಾರೆ.

ನೈಕ್ ಕಂಪೆನಿಯ ಪ್ರಮುಖ ಗ್ರಾಹಕಿಯಾಗಿರುವ ಹಾಲಿ ವಿಂಬಲ್ಡನ್ ಚಾಂಪಿಯನ್ ಸೆರೀನಾ ವಿಲಿಯಮ್ಸ್ ಕೂಡ ಆಡುವಾಗ ಸ್ವಲ್ಪ ಬದಲಾವಣೆ ಮಾಡಲಾಗಿರುವ ಡ್ರೆಸ್ ಧರಿಸಲಿದ್ದಾರೆ.

ನೈಕ್ ಬಿಡುಗಡೆಗೊಳಿಸಿದ ಹೊಸ ಡ್ರೆಸ್ ಸೊಂಟದ ಭಾಗದಲ್ಲಿ ಕಿರಿದಾಗಿದೆಯಲ್ಲದೆ ಆಳವಾದ ನೆಕ್ ಲೈನ್ ಹೊಂದಿರುವುದು ಹಲವು ಆಟಗಾರ್ತಿಯರಿಗೆ ಇಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News