ರಶ್ಯಕ್ಕೆ ಪರಿಹಾರ ನೀಡಲು ಟರ್ಕಿ ಸಿದ್ಧ: ಪ್ರಧಾನಿ

Update: 2016-06-28 11:00 GMT

ಅಂಕಾರ, ಜೂ. 28: ಕಳೆದ ವರ್ಷದ ನವೆಂಬರ್‌ನಲ್ಲಿ ಸಿರಿಯದ ಆಗಸದಲ್ಲಿದ್ದ ರಶ್ಯದ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಕ್ಕಾಗಿ ‘‘ಅಗತ್ಯವಿದ್ದರೆ’’ ಪರಿಹಾರ ನೀಡಲು ಟರ್ಕಿ ಸಿದ್ಧವಿದೆ ಎಂದು ಪ್ರಧಾನಿ ಬಿನಲಿ ಯಿಲ್ಡಿರಿಮ್ ಹೇಳಿದ್ದಾರೆ.

‘‘ಅಗತ್ಯವಿದ್ದರೆ ಪರಿಹಾರ ನೀಡಲು ನಾವು ಸಿದ್ಧ ಎಂದು ಹೇಳಿದ್ದೇವೆ’’ ಎಂದು ಸೋಮವಾರ ಸರಕಾರಿ ಟಿವಿ ಟಿಆರ್‌ಟಿಗೆ ಹೇಳಿದರು.
ಈ ಘಟನೆಯ ಬಗ್ಗೆ ಮಾತುಕತೆಗೆ ಸಿದ್ಧ ಎಂಬ ಸಂದೇಶವನ್ನು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ರಶ್ಯಕ್ಕೆ ರವಾನಿಸಿದ ಗಂಟೆಗಳ ಬಳಿಕ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ವಿಮಾನ ಉರುಳಿಸಿದ ಘಟನೆಯ ಬಳಿಕ ಉಭಯ ದೇಶಗಳ ಸಂಬಂಧ ಮುರಿದುಬಿದ್ದಿತ್ತು. ಈ ಎರಡು ದೇಶಗಳು ಸಿರಿಯ ಆಂತರಿಕ ಯುದ್ಧದಲ್ಲಿ ಎದುರಾಳಿ ಬಣಗಳನ್ನು ಬೆಂಬಲಿಸುತ್ತಿವೆ.

ಎರಡು ದೇಶಗಳ ನಡುವೆ ಮತ್ತೆ ಬಾಂಧವ್ಯ ಬೆಳೆಸುವುದು ಹೇಗೆಂಬ ಬಗ್ಗೆ ಎರ್ದೊಗಾನ್ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಬುಧವಾರ ಅಥವಾ ಗುರುವಾರ ಮಾತುಕತೆ ನಡೆಸಲಿದ್ದಾರೆ ಎಂಬ ಸೂಚನೆಯನ್ನೂ ಪ್ರಧಾನಿ ನೀಡಿದರು.

‘‘ಈ ವಿಷಯದಲ್ಲಿ ನಾವು ಒಂದು ತಿಳುವಳಿಕೆಗೆ ಬಂದಿದ್ದೇವೆ ಎಂದು ಅನಿಸುತ್ತದೆ. ಈ ಘಟನೆಯನ್ನು ನಾವು ಮರೆತು ಮುಂದೆ ಸಾಗುತ್ತೇವೆ’’ ಎಂದು ಯಿಲ್ಡಿರಿಮ್ ನುಡಿದರು.

ಈ ಮೊದಲು, ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ಕ್ಷಮೆ ಕೋರಲು ಟರ್ಕಿ ನಿರಾಕರಿಸಿತ್ತು. ರಶ್ಯದ ವಿಮಾನ ತನ್ನ ವಾಯು ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿತ್ತು ಹಾಗೂ ಪದೇ ಪದೇ ನೀಡಿದ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತ್ತು ಎಂದು ಅದು ಹೇಳಿತ್ತು.

ಆದರೆ, ತನ್ನ ವಿಮಾನ ಗಡಿಯನ್ನು ದಾಟಿಲ್ಲ ಎಂದು ರಶ್ಯ ಹೇಳಿತ್ತು ಹಾಗೂ ಟರ್ಕಿ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿದೆ ಎಂದು ಆರೋಪಿಸಿತ್ತು.

ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸಾದ್ ಸರಕಾರವನ್ನು ಉರುಳಿಸಲು ಬಂಡುಕೋರರು ನಡೆಸುತ್ತಿರುವ ಯುದ್ಧದಲ್ಲಿ, ಟರ್ಕಿ ಬಂಡುಕೋರರಿಗೆ ಬೆಂಬಲ ನೀಡುತ್ತಿದ್ದರೆ, ರಶ್ಯ ಸಿರಿಯ ಅಧ್ಯಕ್ಷರಿಗೆ ನೆರವು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News