ಕಾಲಾವಕಾಶ ನೀಡಿ ಕ್ರಮ ಕೈಗೊಳ್ಳಿ: ಶಾಲಾ ಮಕ್ಕಳ ವಾಹನಗಳ ಚಾಲಕರ ಆಗ್ರಹ
ಮಂಗಳೂರು, ಜೂ.28: ಮಕ್ಕಳನ್ನು ವಾಹನ ಚಾಲಕರ ಮೇಲಿನ ನಂಬಿಕೆಯಿಂದ ಪೋಷಕರು ಕಳುಹಿಸಿಕೊಡುವುದರಿಂದ ಅವರ ಸುರಕ್ಷತೆಯನ್ನು ಪ್ರಾಧಾನ್ಯವಾಗಿಟ್ಟುಕೊಂಡು ವಾಹನ ಚಾಲಕರು ಮಕ್ಕಳನ್ನು ಮನೆಗೆ ತಲುಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ನಿರ್ಧಾರದ ಬಗ್ಗೆ ವಿರೋಧವಿಲ್ಲವಾದರೂ, ವಾಹನ ಚಾಲಕರಿಗೆ ಸ್ವಲ್ಪ ಸಮಯಾವಕಾಶ ನೀಡಿ ಎಂಬ ಆಗ್ರಹ ಶಾಲಾ ಮಕ್ಕಳ ಖಾಸಗಿ ವಾಹನ ಚಾಲಕರಿಂದ ವ್ಯಕ್ತವಾಗಿದೆ.
ಶಾಲಾ ಮಕ್ಕಳ ವಾಹನ ಚಾಲಕರಿಗೆ ವಿನಾ ಕಾರಣ ಕಿರುಕುಳ ಹಾಗೂ ವಿಪರೀತ ದಂಡ ವಸೂಲಿ ಮಾಡುತ್ತಿದ್ದಾರೆ ಹಾಗೂ ಜಿಲ್ಲಾಡಳಿತ ಅವೈಜ್ಞಾನಿಕ ಕ್ರಮವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಶಾಲಾ ಮಕ್ಕಳ ವಾಹನ ಚಾಲಕರ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯ ವೇಳೆ ಈ ಆಗ್ರಹ ವ್ಯಕ್ತವಾಯಿತು.
ಶಾಲಾ ವಾಹನ ಚಾಲಕ ಹಾಗೂ ಮಾಲಕ ಸಂಘದ ಲೇಡಿಹಿಲ್ ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಕೊಟ್ಟಾರ ಮಾತನಾಡಿ, ಮಂಗಳೂರಿನಲ್ಲಿ ಶೇ. 60ರಷ್ಟು ಜನರು ಉದ್ಯೋಗಸ್ಥರಿದ್ದಾರೆ. ಅವರ ಮಕ್ಕಳನ್ನು ಶಾಲೆಗೆ ಸುರಕ್ಷಿತವಾಗಿ ಕರೆದುದೊಯ್ದು ಮತ್ತೆ ಮರಳಿ ಮನೆಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮಕ್ಕಳ ಸುರಕ್ಷತೆ ಬಗ್ಗೆ ಹೆತ್ತವರು, ಶಿಕ್ಷಕರಂತೆ ವಾಹನ ಚಾಲಕರೂ ಕಾಳಜಿ ವಹಿಸುತ್ತಾರೆ ಎಂದರು.
ಶಾಲೆ ನಿರ್ಮಾಣ ಮಾಡಲು ಅನುಮತಿ ನೀಡಲಾಗುತ್ತಿದೆ. ಆದರೆ, ಶಾಲೆಗೆ ಯಾರೂ ವಾಹನ ಹಾಕುತ್ತೇವೆ ಎಂದು ಹೇಳುವುದಿಲ್ಲ. ಈ ಹಿಂದೆ ಆದೇಶದ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ 3-4 ವಾಹನಗಳನ್ನು ಹಾಕಲಾಯಿತಾದರೂ, ಶೇ. 40ರಷ್ಟು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗುತ್ತಿದ್ದು, ಇಂದಿಗೂ ಶೇ. 60ರಷ್ಟು ಮಕ್ಕಳು ಖಾಸಗಿ ವಾಹನಗಳಲ್ಲಿ ಶಾಲೆಗೆ ತೆರಳುತ್ತಿದ್ದಾರೆ. ಶಾಲಾ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸುತ್ತಿದ್ದರೂ ಅದರ ಮೇಲೆ ಯಾವುದೇ ಕ್ರಮ ಆಗುತ್ತಿಲ್ಲ. ಆದರೆ ಖಾಸಗಿ ವಾಹನ ಚಾಲಕರು 10 ತಿಂಗಳು ಮಾತ್ರ ಬಾಡಿಗೆ ಪಡೆದುಕೊಂಡರೆ, ಶಾಲಾ ವಾಹನಗಳು 12 ತಿಂಗಳ ಬಾಡಿಗೆಯನ್ನೂ ಕೂಡಾ ಪೋಷಕರಿಂದ ಪಡೆಯುತ್ತಾರೆ. ಮಕ್ಕಳನ್ನು ಸುರಕ್ಷಿತವಾಗಿ ಕೊಂಡೊಯ್ಯುವ ವಾಹನ ಚಾಲಕರಿಗೆ ಕೂಡಾ ತೆರಿಗೆಯಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಪ್ರತೀ ಶಾಲೆಗಳಲ್ಲಿ ಶಾಲಾ ವಾಹನ ಸುರಕ್ಷಾ ಸಮಿತಿಗಳನ್ನು ರಚಿಸಿ, ಮಕ್ಕಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಪಘಾತಕ್ಕೆ ಕೇವಲ ವಾಹನ ಚಾಲಕರೇ ಕಾರಣ ಎಂದು ಹೇಳುವುದು ಸರಿಯಲ್ಲ. ಅಲ್ಲದೇ, ವಾಹನಗಳಿಗೆ ಹಳದಿ ಬಣ್ಣ ಬಳಿಯಬೇಕೆಂಬ ನಿರ್ಧಾರವೂ ಸಮಂಜಸವಲ್ಲ. ಇದರಿಂದ ಬಾಡಿಗೆಗೆ ತೆರಳಲು ಕೂಡಾ ಅವರಿಗೆ ಸಮಸ್ಯೆಯಾಗುತ್ತದೆ. ಈಗಾಗಲೇ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ಚಾಲಕರಿಗೆ ಯಾವುದೇ ತೊಂದರೆ ನೀಡದೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಹಿಂದೂ ಸಂಘಟನೆಯ ಮುಖಂಡ ಕುಮಾರ್ ಮಾಲೆಮಾರ್, ಶಾಲಾ ವಾಹನ ಚಾಲಕ ಹಾಗೂ ಮಾಲಕ ಸಂಘದ ಸಂಚಾಲಕ ಗಂಗಾಧರ ರೈ, ಪ್ರವೀಣ್ ಕೋಡಿಕಲ್, ಸತೀಶ್ ಪೂಜಾರಿ, ಲೋಕೇಶ್ ಸುರತ್ಕಲ್, ಮುನ್ನ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.