×
Ad

ಪೆರುವಾಯಿ: ಪಂಚಾಯತ್ ನ ಮಹಿಳಾ ಸಿಬ್ಬಂದಿ ಬಾವಿಗೆ ಹಾರಿ ಆತ್ಮಹತ್ಯೆ

Update: 2016-06-28 18:02 IST

ಬಂಟ್ವಾಳ, ಜೂ. 28: ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುವಾಯಿ ಗ್ರಾಮ ಪಂಚಾಯತ್ ಸಿಬ್ಬಂದಿ ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮುಚ್ಚಿರಪದವು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಮುಚ್ಚಿರಪದವು ಕ್ವಾಟ್ರಸ್ ನಿವಾಸಿ ಆನಂದ ಎಂಬವರ ಪುತ್ರಿ ಅಕ್ಷತಾ(23) ಆತ್ಮಹತ್ಯೆಗೆ ಶರಣಾದ ಯುವತಿ. ಪೆರುವಾಯಿ ಗ್ರಾಮ ಪಂಚಾಯತ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಖಾಯಂ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈಕೆಯನ್ನು ಒಂದೂವರೆ ವರ್ಷದ ಹಿಂದೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮಾಣಿಲ ಗ್ರಾಮ ಪಂಚಾಯತ್‌ಗೆ ನಿಯೋಜಿಸಲಾಗಿತ್ತು. 

ಮಂಗಳವಾರ ಬೆಳಗ್ಗೆ ಈಕೆ ಮನೆಯಿಂದ ಕಚೇರಿಗೆ ಕೆಲಸಕ್ಕೆಂದು ಬಂದಿದ್ದಳು. ಸ್ವಲ್ಪ ಸಮಯದ ಬಳಿಕ ತಲೆ ನೋವು ಇದೆ ಎಂದು ಪಂಚಾಯತ್‌ನಿಂದ ಮನೆಗೆ ವಾಪಸ್ ತೆರಳಿದ್ದ ಅಕ್ಷತಾ ಪೆರುವಾಯಿ ಸಮೀಪದ ಮುಚ್ಚಿರಬೆಟ್ಟು ಎಂಬಲ್ಲಿ ಕೆರೆಗೆ ಹಾರಿದ್ದಾಳೆ. ತಕ್ಷಣವೇ ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಮೃತದೇಹ ಮೇಲೆತ್ತುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ.

ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ ಪಂಚಾಯತ್‌ನಲ್ಲಿ ನಡೆಯುತ್ತಿದ್ದ ರಾಜಕೀಯ ಜಂಜಾಟವೇ ಸಿಬ್ಬಂದಿಯ ಆತ್ಮಹತ್ಯೆಗೆ ಕಾರಣವೆಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿರುವ ಬಗ್ಗೆ ತಿಳಿದು ಬಂದಿದೆ. ಮೃತದೇಹವನ್ನು ಮಹಜರು ನಡೆಸಲು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News