ಕಡಬ: ವಿಶಿಷ್ಟವಾಗಿ ನೆಲ-ಜಲದ ಸಂರಕ್ಷಣೆಗೆ ಮುಂದಾಗಿದೆ ಯುವಕರ ತಂಡ

Update: 2016-06-28 14:30 GMT

ಕಡಬ, ಜೂ.28: ಸಾರ್ವಜನಿಕ ಪ್ರದೇಶದಲ್ಲಿ ಗಿಡ ನೆಟ್ಟು ವನ ಮಹೋತ್ಸವ ಆಚರಿಸುವ ಬದಲು ತಮ್ಮ ವ್ಯಾಪ್ತಿಯ ಪ್ರತಿ ಮನೆಮನೆಗೂ ತೆರಳಿ ಗಿಡನೆಟ್ಟು ಅದರ ಪೋಷಣೆ, ನಿರ್ವಹಣೆ ಮಾಡುವ ಮೂಲಕ ಮನೆಯವರಿಗೂ ಜಾಗೃತಿ ಉಂಟುಮಾಡುವ ಮೂಲಕ ಪರಿಸರ, ನೆಲ, ಜಲ ಸಂರಕ್ಷಣೆಯ ಕಾರ್ಯಕ್ಕೆ ಪಾಲ್ತಾಡುವಿನ ಶ್ರೀವಿಷ್ಣು ಮಿತ್ರವೃಂದ ಮಹತ್ವದ ಹೆಜ್ಜೆ ಇಟ್ಟಿದೆ. ಪರಿಸರ ಮಾಲಿನ್ಯ, ಬರ ಪರಿಸ್ಥಿತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಗಿಡ ನೆಟ್ಟು, ಹಸಿರು ಬೆಳೆಸುವುದರ ಜೊತೆಗೆ ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕಾರ್ಯಕ್ಕೆ ಸಣ್ಣ ಹೆಜ್ಜೆ ಇಟ್ಟಿದೆ.

ಕಳೆದ 5 ವರ್ಷದ ಹಿಂದೆ ಸ್ಥಾಪನೆಯಾದ ಸಮಾನ ಮನಸ್ಕ 13 ಮಂದಿ ಯುವಕರು ಸೇರಿ ರಚಿಸಿದ ಈ ಮಿತ್ರವೃಂದ ಅನೇಕ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಗುರುತಿಸಿಕೊಂಡಿದೆ.

ಈ ಬಾರಿ ಜಿಲ್ಲೆಯಲ್ಲಿ ಎಂದೂ ಬಾರದ ಬರ ಪರಿಸ್ಥಿತಿ ತಲೆದೋರಿದ್ದು, ಇದರ ಪರಿಣಾಮವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬೇಕೆಂಬ ನಿಟ್ಟಿನಲ್ಲಿ ಮನೆಮನೆ ಗಿಡನಾಟಿ, ಇಂಗುಗುಂಡಿ ನಿರ್ಮಾಣಮಾಡಿ ಸಮಾಜಕ್ಕೂ, ಆ ಮನೆಯವರಿಗೂ ಜಾಗೃತಿ ಮೂಡಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ನಾವು ನಿರೀಕ್ಷೆ ಇಟ್ಟಿಲ್ಲ. ನಾವು ಪರಿಸರದಿಂದ ಹಲವು ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ. ಅದಕ್ಕಾಗಿ ಸಣ್ಣಮಟ್ಟಿನಲ್ಲಿ ಅದರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ಪ್ರತೀ ವರ್ಷ ಗಿಡನೆಟ್ಟು ವನಮಹೋತ್ಸವ ಆಚರಿಸುತ್ತೇವೆ. ಆದರೆ ಗಿಡ ನೆಟ್ಟ ನಂತರ ಅದರ ಕಡೆ ನೋಡುವುದು ಕಡಿಮೆಯಾಗುತ್ತದೆ. ಯಾವುದೇ ಕಾರ್ಯ ಮಾಡಿದರೂ ಅದರ ಉದ್ದೇಶ ಈಡೇರಬೇಕೆಂಬುದು ಮಿತ್ರವೃಂದದ ಆಶಯ. ಈ ನಿಟ್ಟಿನಲ್ಲಿ ಈ ಕೆಲಸಕ್ಕೆ ಸಣ್ಣ ಹೆಜ್ಜೆ ಇಡುತ್ತಿದ್ದೇವೆ. ಮುಂದೆ ಇದನ್ನು ಸ್ಥಳೀಯ ಶಾಲೆಗಳಲ್ಲಿ ನಡೆಸುವ ಇರಾದೆ ಇದೆ ಎನ್ನುತ್ತಾರೆ ಇದರ ಸದಸ್ಯರು.

ಸಸ್ಯನಾಟಿ ಕಾರ್ಯಕ್ಕೆ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಚಾಲನೆ ನೀಡಿ ಮಾತನಾಡಿ, ಮನೆಮನೆಗೆ ಭೇಟಿ ನೀಡಿ ಗಿಡ ನೆಡುವ ಕಾರ್ಯಕ್ರಮ ನಡೆಸುವ ಮೂಲಕ ಇಲ್ಲಿನ ಯುವಕರು ಉತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ಅದರ ಮಹತ್ವವನ್ನು, ಅನಿವಾರ್ಯತೆಯನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಜೊತೆಗೆ ಅದರ ನಿರ್ವಹಣೆಯ ಹೊಣೆಯನ್ನು ತಾವೇ ವಹಿಸಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಯುವ ಸಂಸ್ಥೆಗಳ ಸಮಾಜ ಮುಖಿ ಚಟುವಟಿಕೆಗೆ ಒಕ್ಕೂಟ, ಯುವಜನ ಸೇವಾ ಕ್ರಿಡಾ ಇಲಾಖೆಯ ಮೂಲಕ ಸಂಪೂರ್ಣ ಪ್ರೋತ್ಸಾಹ ನೀಡಲಾಗುವುದು ಎಂದರು.

ಇಂಗುಗುಂಡಿ ನಿರ್ಮಾಣಕ್ಕೆ ಸವಣೂರು ಗ್ರಾ.ಪಂ.ಮಾಜಿ ಸದಸ್ಯ ಸುಧಾಮ ಮಣಿಯಾಣಿ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ.ಎಸ್.ಬರೆಪ್ಪಾಡಿ, ಸವಣೂರು ಜೆಸಿಐ ಪೂರ್ವಾಧ್ಯಕ್ಷ ಶಶಿಕುಮಾರ್ ಬಿ.ಎನ್., ವಿಷ್ಣು ಮಿತ್ರವೃಂದದ ಮನೀಶ್ ಕುಮಾರ್ ಕೆ., ಶಿವಪ್ರಸಾದ್ ಕೆ., ನವೀನ ನಾಯ್ಕ ಕೆ., ಜಗದೀಶ ಅಂಕತ್ತಡ್ಕ, ಸಂತೋಷ್ ನಾಯ್ಕ, ಪುರಂದರ, ಗಣೇಶ್ ಬೇರಿಕೆ, ತೇಜಸ್, ದೀಕ್ಷಿತ್ ರೈ, ಬಾಲಕೃಷ್ಣ ರೈ ನೆಲ್ಯಾಜೆ ಉಪಸ್ಥಿತರಿದ್ದರು.

ಪರಿಸರದ ಪಾಲ್ತಾಡು, ತಾರಿಪಡ್ಪು, ಕಾಪುತಕಾಡು, ಕಾಪುತಮೂಲೆ, ಬೇರಿಕೆ, ನೆಲ್ಯಾಜೆ, ಮಣಿಕ್ಕರದಲ್ಲಿ ಈ ಕಾರ್ಯವನ್ನು ನಡೆಸಲಾಯಿತು.
ಮಿತ್ರವೃಂದದ ಪ್ರವೀಣ್ ಕುಮಾರ್ ಸ್ವಾಗತಿಸಿ, ದೇವಿಪ್ರಸಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News