ವೇಗ ಪಡೆದುಕೊಳ್ಳುತ್ತಿರುವ ಸೌದೀಕರಣ, ಉದ್ಯಮಿಗಳಲ್ಲಿ ತಳಮಳ

Update: 2016-06-28 14:40 GMT

ಮದೀನಾ, ಜೂ. 28: ಮದೀನಾ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಸಲ್ಮಾನ್‌ರ ಸೌದೀಕರಣ ಅಭಿಯಾನವನ್ನು ಶ್ಲಾಘಿಸಿರುವ ಸೌದಿ ಕಾರ್ಮಿಕ ಸಚಿವಾಲಯದ ಅಧಿಕಾರಿಯೊಬ್ಬರು, ಅಭಿಯಾನಕ್ಕೆ ಸಾರ್ವಜನಿಕರು ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲ ಅಂಗಡಿಗಳನ್ನು ವಲಸಿಗರಿಂದ ಮುಕ್ತಗೊಳಿಸುವ ಉದ್ದೇಶವನ್ನು ಹೊಂದಿರುವ ಸೌದೀಕರಣ ಅಭಿಯಾನವು ಈ ಹಿಜರಿ ವರ್ಷದ ಕೊನೆಯ ವೇಳೆಗೆ ತನ್ನ ಗುರಿಯನ್ನು ಸಾಧಿಸಲಿದೆ ಎಂದು ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯದ ಮದೀನಾ ಶಾಖೆಯಲ್ಲಿ ತಪಾಸಣೆ ಇಲಾಖೆಯ ನಿರ್ದೇಶಕರಾಗಿರುವ ನಜಿ ಅಲ್-ಅಹ್ಮದಿ ತಿಳಿಸಿದರು.

ಯಾವುದೇ ಅಂಗಡಿಯು ಈ ಆದೇಶವನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಹಾಗೂ ಅಂಗಡಿಯನ್ನು ಮುಚ್ಚಲಾಗುವುದು.

‘‘ಅಲ್ ಕಿಬ್ಲಟೈನ್‌ನಲ್ಲಿ ಮಹಿಳೆಯರೇ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುವ ಅಂಗಡಿಯೊಂದನ್ನು ಇಡಲು ಅವಕಾಶ ನೀಡಲಾಗಿದೆ. ಇಂಥದೇ ಅಂಗಡಿಯೊಂದು ತೈಬಾ ವಿಶ್ವವಿದ್ಯಾನಿಲಯದಲ್ಲಿರುತ್ತದೆ. ಇದಕ್ಕಾಗಿ ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ’’ ಎಂದು ಅಲ್-ಅಹ್ಮದಿ ತಿಳಿಸಿದರು.

ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯಗಳನ್ನು ವಿಲೀನಗೊಳಿಸುವ ಪ್ರಸ್ತಾಪವನ್ನು ಅವರು ಖಚಿತಪಡಿಸಿದರು. ‘‘ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯಗಳನ್ನು ವಿಲೀನಗೊಳಿಸುವುದು ಒಂದು ದಾರ್ಶನಿಕ ಕ್ರಮವಾಗಿದೆ. ಕಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣ ಸಚಿವ ಡಾ. ಮುಫ್ರೇಜ್ ಅಲ್-ಹಕಬನಿ ಈ ವಿಲೀನಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News