ವಳಚ್ಚಿಲ್ ಪದವು: ಕಲ್ಲಿನ ಕ್ವಾರೆಯಲ್ಲಿ ಮುಳುಗಿ ವಲಸೆ ಕಾರ್ಮಿಕ ಮೃತ್ಯು

Update: 2016-06-28 18:07 GMT

ಬಂಟ್ವಾಳ, ಜೂ. 28: ಕಲ್ಲಿನ ಕ್ವಾರೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ವಲಸೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮಂಗಳೂರು ತಾಲೂಕಿನ ವಳಚ್ಚಿಲ್ ಪದವಿನಲ್ಲಿ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

ಮೃತ ವಲಸೆ ಕಾರ್ಮಿಕನನ್ನು ಬಿಹಾರ ಮೂಲದ ನಿವಾಸಿ ಕಿಶೋರ್(35) ಎಂದು ಗುರುತಿಸಲಾಗಿದೆ. ಇವರು ವಳಚ್ಚಿಲ್ ಪದವು ಎಕ್ಸ್‌ಪರ್ಟ್ ಕಾಲೇಜಿನ ಸಮೀಪ ಕಾರ್ಯಾಚರಿಸುತ್ತಿರುವ ಇಲ್ಲಿನ ನಿವಾಸಿ ಯಡ್ಡು ಎಂಬವರಿಗೆ ಸೇರಿದ ಕಲ್ಲಿನ ಕ್ವಾರೆಯಲ್ಲಿ ಕೆಲವು ವರ್ಷಗಳಿಂದ ಕೆಲವ ಮಾಡುತ್ತಿದ್ದರು.

ಇಂದು ಸಂಜೆ ಕೆಲಸ ಮುಗಿಸಿದ ಬಳಿಕ ತನ್ನ 7 ವರ್ಷದ ಮಗನೊಂದಿಗೆ ಕಲ್ಲಿನ ಕ್ವಾರೆಯಲ್ಲಿ ತುಂಬಿರುವ ಮಳೆ ನೀರಿನಲ್ಲಿ ಕೈ ಕಾಲು ತೊಳೆಯಲೆಂದು ತೆರಳಿದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. 

ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಲ್ಲಿನ ಕ್ವಾರೆ ತುಂಬಾ ನೀರು ನಿಂತಿದ್ದು, ಆಲ ಹೆಚ್ಚಿದ್ದರಿಂದ ಕಾಲು ಜಾರಿ ಬಿದ್ದ ಕಿಶೋರ್ ಈಜಲು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರ ಮಗ ಕ್ವಾರೆಯ ಮೇಲೆ ನಿಂತು ಕೂಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಜನರು ಕ್ವಾರೆಗೆ ಇಳಿದು ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಕಂಕನಾಡಿ ಪೊಲೀಸರು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಳಚ್ಚಿಲ್ ಪದವು ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಅಕ್ರಮ ಕಲ್ಲಿನ ಕ್ವಾರೆಗಳು ಕಾರ್ಯಚರಿಸುತ್ತಿದ್ದು, ಬೇಸಿಗೆಯಲ್ಲಿ ನಿರ್ಮಿಸಿದ ಬೃಹತ್ ಆಳದ ಕಲ್ಲಿನ ಕ್ವಾರೆಯಲ್ಲಿ ಮಳೆ ನೀರು ತುಂಬಿದೆ. ಇದನ್ನು ಮುಚ್ಚುವ ಕೆಲಸ ಇನ್ನೂ ನಡೆದಿಲ್ಲ ಎಂದು ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಬಾರದೆ ಮೃತದೇಹ ಸಾಗಿಸಲು ಯತ್ನ: ಸ್ಥಳೀಯರಿಂದ ಆಂಬ್ಯುಲೆನ್ಸ್ ತಡೆದು ಪ್ರತಿಭಟನೆ

ಕಲ್ಲಿನ ಕ್ವಾರೆಯಲ್ಲಿ ಮುಳುಗಿ ವಲಸೆ ಕಾರ್ಮಿಕ ಮೃತಪಟ್ಟ ವಿಷಯ ತಕ್ಷಣ ಕಂಕನಾಡಿ ಪೊಲೀಸರಿಗೆ ತಿಳಿಸಿದ್ದರೂ ರಾತ್ರಿ 11 ಗಂಟೆಯವರೆಗೂ ಪೊಲೀಸರು ಸ್ಥಳಕ್ಕೆ ಆಗಮಿಸಿರಲಿಲ್ಲ. ಅಲ್ಲದೆ ಈ ನಡುವೆ ಸ್ಥಳಕ್ಕೆ ಬಂದ ಸುರಕ್ಷಾ ಹೆಸರಿನ ಆಂಬ್ಯುಲೆನ್ಸ್ ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಹಾಕಿ ಕೊಂಡೊಯ್ಯುವಾಗ ಸ್ಥಳದಲ್ಲಿ ಜಮಾಯಿಸಿದ ನೂರಾರು ಸ್ಥಳೀಯ ಜನರು ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸದೆ ಮೃತದೇಹ ಕೊಂಡೊಯ್ಯಬಾರದು ಎಂದು ಆ್ಯಂಬ್ಯುಲೆನ್ಸ್ ತಡೆದು ಪ್ರತಿಭಟನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News