ಬೆಂಗಳೂರಿನಲ್ಲಿ ಎರಡನೆ ಇನಿಂಗ್ಸ್ ಆರಂಭಿಸಿದ ಅನಿಲ್ ಕುಂಬ್ಳೆ

Update: 2016-06-29 08:55 GMT

ಬೆಂಗಳೂರು,ಜೂ.29: ಅನಿಲ್ ಕುಂಬ್ಳೆ ಆಟಗಾರನಾಗಿ, ಪ್ರೇಕ್ಷಕನಾಗಿ, ಆಡಳಿತನಾಗಿ ಹಾಗೂ ಟೀಮ್ ಮೆಂಟರ್ ಆಗಿ ಎಂ.ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡುತ್ತಾ ಬಂದಿದ್ದಾರೆ. ಆದರೆ,ಅವರು ಬುಧವಾರ ಹೊಸ ಅವತಾರದಲ್ಲಿ ಕಾಣಿಸಿಕೊಂಡರು. ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಕೋಚ್ ಆಗಿ ತವರು ಮೈದಾನದಲ್ಲಿ ತನ್ನ ಕಾರ್ಯವನ್ನು ಆರಂಭಿಸಿದರು.
 
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸುಮಾರು 8 ವರ್ಷಗಳ ಬಳಿಕ ಸ್ಪಿನ್ ದಂತಕತೆ ಎರಡನೆ ಇನಿಂಗ್ಸ್ ಆರಂಭಿಸಿದ್ದಾರೆ. ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ವಾರಗಳ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಕುಂಬ್ಳೆ ಆಟಗಾರರೊಂದಿಗೆ ಬೆರೆತು ಅನುಭವ ಹಂಚಿಕೊಳ್ಳಲಿದ್ದಾರೆ.

ರವಿ ಶಾಸ್ತ್ರಿ ಹಾಗೂ ಟಾಮ್ ಮೂಡಿ ಅವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಒಂದು ವರ್ಷದ ಅವಧಿಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದ ಕುಂಬ್ಳೆ ಬುಧವಾರ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದರು. ಕೋಚ್ ಆಗಿ ತನ್ನೆಲ್ಲಾ ಅನುಭವವನ್ನು ಆಟಗಾರರಿಗೆ ಧಾರೆ ಎರೆಯುವೆ ಎಂದು ಭರವಸೆ ನೀಡಿದರು.
‘‘ಆಟಗಾರರು ಅತ್ಯಂತ ಮುಖ್ಯ. ಅವರು ಯಾವಾಗಲೂ ನಮಗಿಂತ ಮುಂದಿರುತ್ತಾರೆ. ಕೋಚಿಂಗ್ ಸಿಬ್ಬಂದಿಗಳು ಅವರ ಬೆಂಗಾವಲಾಗಿ ಇರುತ್ತಾರೆ. ಇಲ್ಲಿ ರವಿ ಶಾಸ್ತ್ರಿ ಅಥವಾ ಅನಿಲ್ ಮುಖ್ಯವಲ್ಲ. ನಾವೆಲ್ಲರೂ ಭಾರತೀಯ ತಂಡದ ಏಳಿಗೆಗೆ ಕೆಲಸ ಮಾಡಬೇಕು. ಟೀಮ್ ಡೈರೆಕ್ಟರ್ ಆಗಿ ರವಿ ಉತ್ತಮ ಕೆಲಸ ಮಾಡಿದ್ದಾರೆ. ಇಂದು ನಾನಿದ್ದರೆ, ನಾಳೆ ಮತ್ತೊಬ್ಬರು ಬರುತ್ತಾರೆ. ನಾನು ಮೊದಲಿಗೆ ರವಿಗೆ ಕರೆ ಮಾಡಿದ್ದೆ.ಅವರು ನನಗೆ ಅಭಿನಂದನೆ ಸಲ್ಲಿಸಿದ್ದರು’’ ಎಂದು ಕುಂಬ್ಳೆ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಬಿಡುವಿಲ್ಲದ ಕ್ರಿಕೆಟ್ ಆಡಲಿದ್ದು, ಈ ತರಬೇತಿ ಶಿಬಿರ ಆಟಗಾರರಿಗೆ ಅತ್ಯಂತ ಮುಖ್ಯವಾಗಿದೆ. ಕೊಹ್ಲಿ ಬಳಗ ಒಟ್ಟು 17 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಸ್ವದೇಶದಲ್ಲಿ 13 ಪಂದ್ಯಗಳನ್ನು ಆಡಲಿದೆ. ಈ ನಡುವೆ 8 ಏಕದಿನ ಹಾಗೂ 2 ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ.
ಕುಂಬ್ಳೆ ಭಾರೀ ಸವಾಲು ಎದುರಿಸಬೇಕಾಗಿದೆ. ಆಟಗಾರನಾಗಿ ದಣಿವಿಲ್ಲದ ಕಾರ್ಯನೀತಿ ಹೊಂದಿದ್ದ ಕುಂಬ್ಳೆ ಕೋಚ್ ಪಾತ್ರದಲ್ಲಿಯೂ ಆಟಗಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News