ಮಳೆ ಹಾನಿ: ಮನೆ ಕುಸಿತ, ರಸ್ತೆಗೆ ಉರುಳಿ ಬಿದ್ದ ಮರ
ಪುತ್ತೂರು, ಜೂ.29: ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಹಲವೆಡೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಸಿಆರ್ ಸಿ ಕಾಲೊನಿಯ ಬಳಿಯ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಇತ್ತೀಚೆಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆ ಭಾಗಶಃ ಒಡೆದು ಹೋಗಿ ಹಾನಿಗೊಳಗಾಗಿದೆ.
ಕುಂಬ್ರ ಮೆಸ್ಕಾಂ ಸಬ್ ಸ್ಟೇಶನ್ ನಿಂದ ಈಶ್ವರಮಂಗಳ ಹಾಗೂ ಪೆರ್ನಾಜೆಗೆ ಹೋಗುವ ವಿದ್ಯುತ್ ಫೀಡರ್ ಲೈನ್ ಗಳ 6 ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಅರಿಯಡ್ಕ ಪಂಚಾಯತ್ ಉಪಾಧ್ಯಕ್ಷೆ ಸವಿತಾ.ಎಸ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ಮಹಮ್ಮದ್ ಎಂಬವರ ಮನೆಗೆ ಪಕ್ಕದ ಗೋಪಾಲ ಎಂಬವರ ಜಮೀನಿನ ಧರೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಕೃಷ್ಣ ನಾಯ್ಕ ಎಂಬವರ ಮನೆಯ ಬಳಿ ಮಳೆ ನೀರು ಶೇಖರಣೆಯಾಗಿ ಬಾವಿ ಕುಸಿದು ಬಿದ್ದು ಹಾನಿಯಾಗಿದೆ. ಅಲ್ಲೇ ಸಮೀಪದ ತಿಮ್ಮಪ್ಪ ಗೌಡ ಎಂಬವರ ತೋಟಕ್ಕೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಕುಂಬ್ರ ಪೇಟೆಯಲ್ಲಿ ಧರೆ ಕುಸಿದ ಪರಿಣಾಮ ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿದೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಸಜಂಕಾಡಿ ದಲಿತ ಕಾಲೊನಿಯ ಪೂವಮ್ಮ ಎಂಬವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಪೂವಮ್ಮ ಅವರು ಒಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದು, ಘಟನೆಯ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ, ನೆಟ್ಟಣಿಗೆ ಮುಡ್ನೂರು ಗ್ರಾಮಕರಣಿಕ ರಾಧಾಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ದಿ. ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರಿ ಝೊಹರಾ ಎಂಬವರ ಮನೆ ಕುಸಿದು ಭಾಗಶಃ ಹಾನಿಯಾಗಿದೆ ಸ್ಥಳಕ್ಕೆ ಆರ್ಯಾಪು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಗ್ರಾಮಕರಣಿಗೆ ಕನಕರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಅಲ್ ಅಮೀನ್ ಕಮಿಟಿಯ ಪದಾಧಿಕಾರಿಗಳು ಕುಸಿದ ಮನೆಯ ದುರಸ್ತಿಗೆ ಸಹಕಾರ ನೀಡಿದರು.