ಕಾಸರಗೋಡು: ಲಂಚ ಪಡೆಯುತ್ತಿದ್ದ ಅಧಿಕಾರಿ ವಿಜಿಲೆನ್ಸ್ ಬಲೆಗೆ
ಕಾಸರಗೋಡು, ಜೂ.29: ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಭೂಗರ್ಭ ಜಲ ಇಲಾಖೆಯ ಜಿಲ್ಲಾ ಅಧಿಕಾರಿ ವಿಜಿಲೆನ್ಸ್ ಬಲೆಗೆ ಬಿದ್ದ ಘಟನೆ ಕಣ್ಣೂರಿನ ಕೂತುಪರಂಬದಲ್ಲಿ ನಡೆದಿದೆ.
ಉಪ್ಪಳ ಮಣ್ಣಂಗುಯಿ ಲಿಟ್ಲ್ ಸ್ಟಾರ್ನ ಕೆ.ಎ. ಮುಹಮ್ಮದ್ (53) ಬಲೆಗೆ ಬಿದ್ದ ಅಧಿಕಾರಿ. ಕೂತುಪರಂಬದಲ್ಲಿ ವ್ಯಕ್ತಿಯೊಬ್ಬರ ಹಿತ್ತಲಲ್ಲಿ ಕೊಳವೆಬಾವಿ ಕೊರೆಯುವ ಅರ್ಜಿಯ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದ ಮುಹಮ್ಮದ್ ಲಂಚ ಪಡೆದಿದ್ದರೆನ್ನಲಾಗಿದೆ. ಕೂತುಪರಂಬ ಮಾರ್ಕೆಟ್ ಬಳಿಯ ಜಾನಕಿ ನಿಲಯದ ಪಿ. ಬೈಜು ಎಂಬವರು ನೀಡಿದ ದೂರಿನಂತೆ ಕೆ.ಎ. ಮುಹಮ್ಮದ್ರನ್ನು ಬಂಧಿಸಲಾಗಿದೆ.
ಬೈಜು, ಅವರ ಪತ್ನಿಯ ಹೆಸರಿನಲ್ಲಿ ಚಿಟ್ಟಾರಿಪರಂಬ ಪಟ್ಟೋಳಿ ರೋಡನಲ್ಲಿರುವ ಸ್ಥಳದಲ್ಲಿ ಕೊಳವೆ ಬಾವಿ ತೋಡಲು ಜಿಲ್ಲಾ ಗ್ರೌಂಡ್ ವಾಟರ್ ಅಥಾರಿಟಿ ಕಚೇರಿಯಲ್ಲಿ ಎ.25ರಂದು 525 ರೂ. ಶುಲ್ಕ ಪಾವತಿಸಿದ್ದರು. ಆದರೆ ಸ್ಥಳ ಪರಿಶೀಲನೆ ನಡೆಸಿರಲಿಲ್ಲ. ಪರಿಶೀಲನೆ ನಡೆಸಬೇಕಿದ್ದರೆ 2,000 ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಕಣ್ಣೂರು ವಿಜಿಲೆನ್ಸ್ ಡಿವೈಎಸ್ಪಿಗೆ ಅರ್ಜಿದಾರ ದೂರು ನೀಡಿದ್ದರು.
ಮಂಗಳವಾರ ಸಂಜೆ ಮುಹಮ್ಮದ್ ಸ್ಥಳ ಪರಿಶೀಲನೆಗಾಗಿ ತೆರಳಿದ್ದಾಗ ವಿಜಿಲೆನ್ಸ್ ಅಧಿಕಾರಿಗಳು ಮಾರ್ಕ್ ಮಾಡಿ ನೀಡಿದ 2,000 ರೂ.ನ್ನು ಲಂಚವಾಗಿ ನೀಡಲಾಗಿತ್ತು. ಹಣವನ್ನು ಪಡೆದ ಕೂಡಲೇ ಮುಹಮ್ಮದರನ್ನು ವಿಜಿಲೆನ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.