ಉಪ್ಪಿನಂಗಡಿ: ಮನೆಯ ಮೇಲೆ ತಡೆಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯ

Update: 2016-06-29 15:01 GMT

ಉಪ್ಪಿನಂಗಡಿ, ಜೂ.29: ಭಾರೀ ಮಳೆಯಿಂದಾಗಿ ತಡೆಗೋಡೆಯೊಂದು ಮನೆಯ ಮೇಲೆ ಕುಸಿದು ಬಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಲಕ್ಷ್ಮೀನಗರದಲ್ಲಿ ಬುಧವಾರ ನಡೆದಿದೆ.

ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಭಂಡಾರಿ ಅವರ ತಾಯಿ ರಾಜೀವಿ ಭಂಡಾರಿ ಅವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರಮೇಶ ಅವರ ಸಹೋದರ ಹರೀಶ್ ಎಂಬವರ ಪತ್ನಿ ಬೇಬಿ (25) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ. 

ಲಕ್ಷ್ಮೀನಗರದಲ್ಲಿ ರಾಜೀವಿ ಅವರ ಮನೆಯ ಮೇಲ್ಗಡೆ ಪ್ರದೇಶದಲ್ಲಿ ಮೆಸ್ಕಾಂನ ಉಪ್ಪಿನಂಗಡಿ ಉಪವಿಭಾಗ ಕಚೇರಿ ಕಾರ್ಯಾಚರಿಸುತ್ತಿದ್ದು, ಇದಕ್ಕೆ ಕಲ್ಲಿನ ತಡೆಗೋಡೆ ಕಟ್ಟಲಾಗಿತ್ತು. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬುಧವಾರ ಬೆಳಗ್ಗೆ ಏಕಾಏಕಿ ತಡೆಗೋಡೆ ಕುಸಿದು ಬಿತ್ತು. ಈ ಸಂದರ್ಭ ಅಲ್ಲಿ ಪಾತ್ರೆ ತೊಳೆಯುತ್ತಿದ್ದ ಬೇಬಿ ಅವರ ಮೇಲೆ ತಡೆಗೋಡೆಯ ಕಲ್ಲುಗಳು ಬಿದ್ದಿದ್ದು, ಇದರಿಂದ ಬೇಬಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಾಯದಿಂದ ಪಾರಾದ ಮಗು

ಈ ಸಂದರ್ಭ ರಾಜೀವಿ ಹಾಗೂ ರಮೇಶ್ ಸೇರಿದಂತೆ ಇನ್ನಿತರರು ಆ ಮನೆಯಲ್ಲಿಯೇ ಇದ್ದು, ಹರೀಶ್ ಅವರ ನಾಲ್ಕು ವರ್ಷದ ಮಗು ಜ್ವರದಲ್ಲಿ ಮಲಗಿತ್ತು. ತಡೆಗೋಡೆ ಬೀಳುವ ಸ್ವಲ್ಪ ಮೊದಲು ಪಾತ್ರೆ ತೊಳೆಯುತ್ತಿದ್ದ ತಾಯಿ ಬೇಬಿ ಅವರ ಬಳಿ ಬರುತ್ತೇನೆಂದು ಮಗು ಹೇಳಿದ್ದು, ಇದಕ್ಕೆ ಬೇಬಿ ಅವರು ನಿರಾಕರಿಸಿ, ಜ್ವರವಿರುವ ಕಾರಣ ಅಲ್ಲಿಯೇ ಮಲಗಲು ತಿಳಿಸಿದ್ದರು. ಅದರಂತೆ ಮಗು ಅಲ್ಲೇ ಮಲಗಿತ್ತು. ಇದರಿಂದ ಅದೃಷ್ಟವಶಾತ್ ಮಗು ಅಪಾಯದಿಂದ ಪಾರಾದಂತಾಗಿದೆ.

ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು, ಉಪ್ಪಿನಂಗಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್, ಗ್ರಾಮ ಸಹಾಯಕ ಯತೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಹೆಗ್ಡೆ, ಮುಹಮ್ಮದ್ ತೌಸಿಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News