3ನೆ ದಿನಕ್ಕೆ ಕಾಲಿಟ್ಟ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ

Update: 2016-06-29 15:20 GMT

ಮಂಗಳೂರು, ಜೂ.29: ಕಾರ್ಮಿಕ ಸವಲತ್ತುಗಳು ಸಮರ್ಪಕವಾಗಿ ಕಾರ್ಮಿಕರಿಗೆ ವಿತರಣೆಯಾಗದಿದ್ದರೇ ಎಷ್ಟೇ ಕಾನೂನುಗಳಿದ್ದರೂ ಪ್ರಯೋಜನವಿಲ್ಲವೆಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ದ.ಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ 3ನೆ ದಿನಕ್ಕೆ ಕಾಲಿರಿಸಿದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಟ್ಟಡ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ನಡೆಸಿದ ಹೋರಾಟದ ಫಲವಾಗಿ ಬಂದ ಕಾರ್ಮಿಕ ಕಾನೂನು ಸವಲತ್ತು ಸರಕಾರಗಳ ನಿತ್ರಾಣದಿಂದಾಗಿ ಜಾರಿಯಾಗುತ್ತಿಲ್ಲ. 4,500 ಕೋಟಿ ರೂಪಾಯಿ ಕಲ್ಯಾಣ ಮಂಡಳಿಯಲ್ಲಿ ಜಮೆಯಾಗಿದ್ದರೂ ಕಾರ್ಮಿಕರಿಗೆ ಸವಲತ್ತು ನಿರಾಕರಣೆಯಾಗುತ್ತಿರುವುದು ಇದಕ್ಕೆ ಸಾಕ್ಷಿ ಎಂದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಗಳು ಕಾರ್ಮಿಕ ವಿರೋಧಿಗಳಾಗಿವೆ. ಅದರ ವಿರುದ್ಧವಾಗಿ ದೇಶವ್ಯಾಪಿ ಕಾರ್ಮಿಕರು ಹೋರಾಟ ನಡೆಸಿ ಹಿಮ್ಮೆಟ್ಟಿಸಬೇಕಾಗಿದೆ. ಕಟ್ಟಡ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇತ್ಯರ್ಥಪಡಿಸಬೇಕೆಂದು ಹೇಳಿದರು.

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮೂರನೇ ದಿನ ನಡೆಯುತ್ತಿದೆ. ಗುರುವಾರ ಈ ಹೋರಾಟವನ್ನು ಅಮರಣಾಂತ ಉಪವಾಸ ಸತ್ಯಾಗ್ರಹ ವಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ. ಸರಕಾರ ಕಟ್ಟಡ ಕಾರ್ಮಿಕರ ಬೇಡಿಕೆಗಳು ಸಮರ್ಪಕವಾಗಿ ಈಡೇರದಿದ್ದರೆ ಹೋರಾಟವನ್ನು ತೀಕ್ಷ್ಣಗೊಳಿಸಬೇಕು. ಎಲ್ಲಾ ಕಡೆಗಳಲ್ಲಿ ರಸ್ತೆ ತಡೆ ಚಳುವಳಿ ನಡೆಸಬೇಕೆಂದು ಹೇಳಿದರು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಕಾರ್ಮಿಕ ಮುಖಂಡರುಗಳಾದ ರಾಮಣ್ಣ ವಿಟ್ಲ, ಚಂದ್ರಹಾಸ ಪಿಲಾರ್, ಸದಾಶಿವದಾಸ್, ಅಶೋಕ ಶೆಟ್ಟಿ, ಸುನೀಲ್ ಕುಮಾರ್, ಪ್ರೇಮನಾಥ, ಕೃಷ್ಣಪ್ಪ ಸಾಲಿಯಾನ್, ಪದ್ಮಾವತಿ ಶೆಟ್ಟಿ, ಸಂತೋಷ್ ನೀತಿನಗರ ಮೊದಲಾದವರು ಮಾತನಾಡಿದರು.

3ನೆ ದಿನದ ಧರಣಿ ಸತ್ಯಾಗ್ರಹವನ್ನು ಜನಾರ್ಧನ ಕುತ್ತಾರ್, ಬಾಬು ಪಿಲಾರ್, ಇಬ್ರಾಹೀಂ, ರೋಹಿದಾಸ್ ಭಟ್ನಗರ, ವಾಲ್ಟರ್ ಡಿಸೋಜ, ನವೀನ್ ಕುತ್ತಾರ್, ರಾಮಚಂದ್ರ ಪಜೀರು ಮೊದಲಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News