ಡೆಂಗ್ ನಿಯಂತ್ರಣದಲ್ಲಿದೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಶಾ

Update: 2016-06-29 15:25 GMT

ಮಂಗಳೂರು, ಜೂ.29:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗಗಳು ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಕಂದರ್ ಪಾಶಾ ತಿಳಿಸಿದ್ದಾರೆ.

2016ನೆ ವರ್ಷದಲ್ಲಿ ಜಿಲ್ಲೆಯಲ್ಲಿ ಇದುವರೆಗೆ 1,146 ಸಂಶಯಾಸ್ಪದ ಡೆಂಗ್ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 261 ಪ್ರಕರಣಗಳಲ್ಲಿ ಡೆಂಗ್ ದೃಢಪಟ್ಟಿದೆ. ಇದುವರೆಗೆ 6 ಜನರು ಡೆಂಗ್‌ನಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ.

ಡೆಂಗ್, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ಸಾಕಷ್ಟು ದಾಸ್ತಾನು ಇಡಲಾಗಿದೆ. ಫಾಗಿಂಗ್ ನಡೆಸಲಾಗುತ್ತಿದೆ. ಹೆಚ್ಚು ಡೆಂಗ್ ಪ್ರಕರಣಗಳು ಕಂಡುಬಂದಿರುವಲ್ಲಿ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಗಿದೆ.

ಯಾವುದೇ ರೀತಿಯ ಜ್ವರ ಬಂದರೆ ಸಾರ್ವಜನಿಕರು ಹೆಚ್ಚು ವಿಳಂಬ ಮಾಡದೆ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಅಕ್ಕಪಕ್ಕ ನೀರು ನಿಲ್ಲಲು ಅವಕಾಶ ನೀಡಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News