ಪ್ರಥಮ ಹಂತದ ಎಡಿಬಿ ಕಾಮಗಾರಿ ಕಳಪೆ: ಒಳಚರಂಡಿ ನೀರು ಬಾವಿಗಳಿಗೆ ಸೇರಿ ಕಲುಷಿತ

Update: 2016-06-29 15:33 GMT

ಮಂಗಳೂರು, ಜೂ.29: ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ)ನ ನೆರವಿನಲ್ಲಿ ಕುಡ್ಸೆಂಪ್‌ನಿಂದ ನಡೆಸಲಾದ ಪ್ರಥಮ ಹಂತದ ಕಾಮಗಾರಿ ಸಂಪೂರ್ಣ ಕಳಪೆ ಹಾಗೂ ಅಸಮರ್ಪಕವಾಗಿದ್ದು, ಒಳಚರಂಡಿ ನೀರು ಚರಂಡಿಗಳಲ್ಲಿ ಹರಿಯುತ್ತಿರುವುದಲ್ಲದೆ, ಬಾವಿಗಳಿಗೆ ಸೇರಿ ಕಲುಷಿತಗೊಂಡಿರುವ ಕುರಿತಂತೆ ಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ತೀವ್ರ ಚರ್ಚೆ, ಅಸಮಾಧಾನಕ್ಕೆ ಕಾರಣವಾಯಿತು.

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರಥಮ ಹಂತದ ಎಡಿಬಿ ಯೋಜನೆ ಅಸಮರ್ಪಕವಾಗಿರುವುದರಿಂದ ಕಾಮಗಾರಿ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ತೀವ್ರ ಆಗ್ರಹವೂ ಸದಸ್ಯರಿಂದ ವ್ಯಕ್ತವಾಯಿತು.

ಸದಸ್ಯ ಅಶೋಕ್ ಶೆಟ್ಟಿಯವರು ತಮ್ಮ ವಿಷಯ ಪ್ರಸ್ತಾಪಿಸುತ್ತಾ, ಇಡ್ಯಾ ರೇಚಕ ಸ್ಥಾವರ (ಎಸ್‌ಟಿಪಿ)ಉದ್ಘಾಟನೆ ನಡೆಸಿ, ವಿದ್ಯುತ್ ಸಂಪರ್ಕ ನೀಡದೆ ಈಗ ಸಮಸ್ಯೆ ಉಂಟಾಗಿದೆ. ಸುರತ್ಕಲ್‌ನಲ್ಲಿ ಹಲವಾರು ಬಾವಿಗಳಲ್ಲಿ ಒಳಚರಂಡಿ ನೀರು ಸೇರಿ ಕುಡಿಯಲು ಅಯೋಗ್ಯವಾಗಿದೆ ಎಂದು ದೂರಿದರು.

ಇದಕ್ಕೆ ಪೂರಕವಾಗಿ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಬಜಾಲ್ ಹಾಗೂ ಸುರತ್ಕಲ್‌ನಲ್ಲಿ ತರಾತುರಿಯಲ್ಲಿ ಎಸ್‌ಟಿಪಿಗಳನ್ನು ಉದ್ಘಾಟನೆ ಮಾಡಿದ ಪರಿಣಾಮವಾಗಿ ಸಮಸ್ಯೆಯಾಗಿದೆ. ಒಳಚರಂಡಿ ನೀರು ಚರಂಡಿಗಳಲ್ಲಿ ಹರಿದು ಬಾವಿ ಸೇರುತ್ತಿದೆ. ಸಂಪೂರ್ಣ ಕಾಮಗಾರಿಯೇ ಕಳಪೆಯಾಗಿದೆ. ಹಾಗಿದ್ದರೂ ಮನೆ ಸಂಪರ್ಕ ನೀಡಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಾಗಿದೆ ಎಂದು ಆಕ್ಷೇಪಿಸಿದರು.

ಈ ಸಂದರ್ಭ ಮನಪಾ ಹಿರಿಯ ಅಭಿಯಂತರರು ಮಾತನಾಡುತ್ತಾ, ಸುರತ್ಕಲ್ ಪ್ರದೇಶಧಲ್ಲಿ ವೆಟ್‌ವೆಲ್‌ಗಳ ನೀರಿನಿಂದಾಗಿ 15 ಬಾವಿಗಳು ಕಲುಷಿತಗೊಂಡಿರುವುದು ದೃಢಪಟ್ಟಿದೆ ಎಂದು ಒಪ್ಪಿಕೊಂಡರು. ಎಡಿಬಿ ಪ್ರಥಮ ಹಂತದ ಕಾಮಗಾರಿ ಬಗ್ಗೆ ಉನ್ನತ ಮಟ್ಟ ತನಿಖೆ ಆಗಬೇಕು. ಜನರ ತೆರಿಗೆಯ ಕೋಟ್ಯಾಂತರ ರೂ. ಹಣವನ್ನು ವ್ಯಯಿಸಿ ಈ ರೀತಿ ಬೇಕಾಬಿಟ್ಟಿಯಾಗಿ ಕೆಲಸ ಮಾಡಿರುವ ಬಗ್ಗೆ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರೂ ದನಿಗೂಡಿಸಿದರು.

ಮೇಯರ್ ಹರಿನಾಥ್‌ರವರು ಕೂಡಾ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಸುರತ್ಕಲ್ ಭಾಗದ ಜನರು ಈಗಾಗಲೇ ತಮ್ಮ ಬಳಿಗೆ ಬಂದು ಬಾವಿ ನೀರು ಕಲುಷಿತಗೊಂಡರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣಕ್ಕೆ ಯಾವ ಕ್ರಮಕೈಗೊಳ್ಳಬಹುದು ಎಂಬುದನ್ನು ತಿಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹಲವು ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳು ಕುಸಿದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಇದರ ವೀಡಿಯೊ ಚಿತ್ರೀರಣವನ್ನು ಮಾಡಿ ಕುಡ್ಸೆಂಪ್ ಆಡಳಿತ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಗುತ್ತಿಗೆದಾರರಿಂದ ಸರಿಪಡಿಸುವಂತೆ ಅವರು ತಿಳಿಸಿದ ಹಿನ್ನೆಲೆಯಲ್ಲಿ ಗುತ್ತಿಗೆದಾರರನ್ನು ಸಂಪರ್ಕಿಸಿ, ದುರಸ್ತಿಗೆ ಒಪ್ಪಿಕೊಂಡಿದ್ದಾರೆ. ಸುಮಾರು ಶೇ. 70ರಷ್ಟು ಕಾಮಗಾರಿ ದುರಸ್ತಿ ಆಗಬೇಕು. ಕುಡ್ಸೆಂಪ್ ಹಾಗೂ ನಮ್ಮ ಅಧಿಕಾರಿಗಳು ಜತೆಯಾಗಿ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿ ಸಭೆಯಲ್ಲಿ ತಿಳಿಸಿದರು.

ದ್ವಿತೀಯ ಹಂತದ ಎಡಿಬಿ ಯೊಜನೆಗೆ ಮೊದಲು ಪ್ರಥಮ ಹಂತದ ಯೋಜನೆಯ ಪುನರ್ ಪರಿಶೀಲನೆಯಾಗಬೇಕು ಎಂದು ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಈ ಸಂದರ್ಭ ಒತ್ತಾಯಿಸಿದರು.

ಮಾಜಿ ಮೇಯರ್ ಮಹಾಬಲ ಮಾರ್ಲ ಪ್ರತಿಕ್ರಿಯಿಸಿ, ಕುಡ್ಸೆಂಪ್‌ಗೆ ಪಾವತಿಯಾಗಲು 5 ಕೋ.ರೂ. ಬಾಕಿ ಇರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಅಸಮರ್ಪಕವಾಗಿ ಒಳಚರಂಡಿ ಮಾಡಿದ ಕಾರಣಕ್ಕಾಗಿ ಅದರ ಸುಸ್ಥಿತಿಗೆ ಈ 5 ಕೋ.ರೂ.ಗಳನ್ನು ಬಳಸಿಕೊಳ್ಳಬೇಕು ಎಂದರು. ಮೇಯರ್ ಹರಿನಾಥ್ ಮಾತನಾಡಿ, ಸದ್ಯ ಸುರತ್ಕಲ್ ಪ್ರದೇಶದ ಜನರಿಗೆ ಆಗಿರುವ ತೊಂದರೆಯನ್ನು ತಕ್ಷಣ ಬಗೆಹರಿಸಬೇಕು. ಹೀಗಾಗಿ ತಾತ್ಕಾಲಿಕವಾಗಿ ಎಸ್‌ಟಿಪಿಗೆ ಹೊಸದಾಗಿ ಮನೆ ಸಂಪರ್ಕ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಅಧಿಕಾರಿಗಳ ತಪ್ಪಿಗೆ ಜನಪ್ರತಿನಿಧಿಗಳನ್ನು ಹೊಣೆಯಾಗಿಸುವ ಕೆಲಸ ಆಗುವುದು ಬೇಡ ಎಂದು ಎಚ್ಚರಿಸಿದರು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಮಾತನಾಡಿ,  ಫ್ಲಾಟ್‌ಗಳ ನಿರ್ಮಾಣದ ಸಂದರ್ಭ 24ಕ್ಕಿಂತ ಹೆಚ್ಚಿನ ಫ್ಲಾಟ್‌ಗಳನ್ನು ಹೊಂದಿದ್ದರೆ ಸ್ವತ ಎಸ್‌ಟಿಪಿ ನಿರ್ಮಾಣ ಮಾಡಬೇಕೆಂಬ ನಿಯವಿದೆ. ಆದರೆ ಬಿಲ್ಡರ್‌ಗಳು ಕೇವಲ ಹೆಸರಿಗೆ ಮಾತ್ರ ಎಸ್‌ಟಿಪಿ ನಿರ್ಮಾಣ ಮಾಡಿ, ಬಳಿಕ ತಮ್ಮ ಫ್ಲಾಟ್‌ಗಳ ನೀರನ್ನು ಡ್ರೈನೇಜ್‌ಗೆ ಬಿಡುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಆಪಾದಿಸಿದರು.

ಭವಂತಿ ಸ್ಟ್ರೀಟ್- ಜಿಎಚ್‌ಎಸ್ ರಸ್ತೆ ಅಗಲೀಕರಣ 15 ದಿನಗಳಲ್ಲಿ ಕಾಮಗಾರಿ!

ಮಂಗಳೂರಿನ ಬಹುಮುಖ್ಯ ರಸ್ತೆಯಾಗಿರುವ ಜಿಎಚ್‌ಎಸ್ ಹಾಗೂ ಭವಂತಿ ಸ್ಟ್ರೀಟ್ ರಸ್ತೆಯನ್ನು ಅಗಲೀಕರಣಕ್ಕೆ ಮನಪಾ ಮುಂದಾಗುತ್ತಿಲ್ಲ. ಅಲ್ಲಿ ಖಾಸಗಿಯವರೊಬ್ಬರ ವಿರೋಧದಿಂದ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ಸದಸ್ಯೆ ಪೂರ್ಣಿಮಾ ಸಭೆಯಲ್ಲಿ ಆರೋಪಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿ, ಈ ಎರಡೂ ರಸ್ತೆಗಳ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ವಿಳಂಬವಾಗಿದೆ. 15 ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಅಗಲೀಕರಣಕ್ಕೆ ಸಂಬಂಧಿಸಿ ಸ್ಥಳದಲ್ಲಿ ಜಾಗ ನೀಡುವಂತೆ ಸಂಬಂಧಪಟ್ಟವರಿಗೆ ನೋಟೀಸ್ ನೀಡಲಾಗಿದೆ ಎಂದರು.

ಉಪ ಮೇಯರ್ ಸುಮಿತ್ರಾ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲೋಟ್ ಪಿಂಟೋ, ಕವಿತಾ ಸನಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News