ಕಾಂಗ್ರೆಸ್ ನತ್ತ ಸುಬ್ರಮಣಿಯನ್ ಸ್ವಾಮಿ ?

Update: 2016-06-29 16:17 GMT

ಹೊಸದಿಲ್ಲಿ, ಜೂ. 29 : ಬಿಜೆಪಿ ಪಾಲಿಗೆ ಅತಿದೊಡ್ಡ ಅಸ್ತ್ರದಿಂದ ಮಗ್ಗುಲ ಮುಳ್ಳಾಗಿ ಬದಲಾಗಿರುವ ಸುಬ್ರಮಣಿಯನ್ ಸ್ವಾಮಿ ನಿಧಾನವಾಗಿ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆಯೇ ? ಹೌದು  ಎನ್ನುತ್ತವೆ ದಿಲ್ಲಿಯ ರಾಜಕೀಯ ವಲಯಗಳು. 

ಖುದ್ದು ಪ್ರಧಾನಿಯೇ ತಮ್ಮ ಹೇಳಿಕೆಯನ್ನು ಖಂಡಿಸಿದ ಮೇಲೂ ಸ್ವಾಮಿ ಸುಮ್ಮನಾಗಲಿಲ್ಲ. ಬದಲಾಗಿ ಕೇಂದ್ರ ಸಚಿವ ಜೇಟ್ಲಿ ಮೇಲೆ ಪರೋಕ್ಷವಾಗಿ  ಹಾಗೂ ಪ್ರಧಾನಿಯ ಬಹುಚರ್ಚಿತ ಸಂದರ್ಶನ ನಡೆಸಿದ ಅರ್ನಬ್ ಗೋಸ್ವಾಮಿ ಮೇಲೆ ನೇರವಾಗಿ ಪ್ರಹಾರ ನಡೆಸಿದ್ದಾರೆ. ಇದರರ್ಥ ಅವರು ಬಗ್ಗುವವರಲ್ಲ. " ತಾವು ದೇಶದ ಯಾವುದೇ ದೊಡ್ಡ ಹುದ್ದೆಗೆ ಸಮರ್ಥ. ಆದರೆ ಬಿಜೆಪಿ ತನಗದನ್ನು ನೀಡುತ್ತಿಲ್ಲ " ಎಂಬ ಅಸಮಾಧಾನ ಸ್ವಾಮಿಗಿದೆ.  

ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ತಮ್ಮ ಪಕ್ಷದ ನಾಯಕರ ಬಳಿ " ಸ್ವಾಮಿ ಮುಂದಿನ ಕೆಲವು ತಿಂಗಳಲ್ಲಿ ನಮ್ಮ ಪಕ್ಷ ಸೇರುತ್ತಾರೆ. ಮತ್ತು ಬಿಜೆಪಿ ಮೇಲೆ ಪೂರ್ಣ ಪ್ರಮಾಣದಲ್ಲಿ ಮುಗಿ ಬೀಳುತ್ತಾರೆ. ಕಾದು ನೋಡಿ" ಎಂದು ಹೇಳಿದ್ದಾರೆ ಎಂದು ಜನ್ ಸತ್ತಾ ವರದಿ ಮಾಡಿದೆ.

ಅದರ ಪ್ರಕಾರ ರಮೇಶ್ ಹಾಗೂ ಸ್ವಾಮಿ ಬಹಳ ಸಮಯದಿಂದ ಸಂಪರ್ಕದಲ್ಲಿದ್ದಾರೆ. ಇತ್ತೀಚಿಗೆ ಸ್ವಾಮಿ ವಿರುದ್ಧ ಕಾಂಗ್ರೆಸ್ ಕೂಡ ಮೆತ್ತಗಾಗಿರುವುದು ಈ ವಾದಕ್ಕೆ ಪುಷ್ಟಿ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News