ಬಿಜೆಪಿಯಿಂದ ತಕ್ಕ ಉತ್ತರದ ಎಚ್ಚರಿಕೆ
ಮುಂಬೈ, ಜೂ.29: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಅಂಗ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆ ನಡುವಿನ ವೈಮನಸ್ಸು ಮತ್ತಷ್ಟು ತಾರಕಕ್ಕೇರಿದೆ. ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಅಣಕಿಸುವ ಪೋಸ್ಟರ್ ಹಚ್ಚುವ ಜತೆಗೆ ಪಕ್ಷದ ನಗರ ಘಟಕದ ಮುಖ್ಯಸ್ಥ ಆಶೀಷ್ ಶೆಲಾರ್ ಅವರ ಪ್ರತಿಕೃತಿ ಸುಟ್ಟುಹಾಕಿದೆ.
ಶಿವಸೇನೆಯ ಈ ಕಿಡಿಗೇಡಿ ಕೃತ್ಯದಿಂದ ಕೋಪಗೊಂಡಿರುವ ಬಿಜೆಪಿ ಈ ಕ್ರಮವನ್ನು ಸರಿಪಡಿಸಿಕೊಳ್ಳದಿದ್ದರೆ ತಕ್ಕ ಉತ್ತರ ನೀಡುವುದಾಗಿ ಅಬ್ಬರಿಸಿದೆ.
ಶಿವಸೇನೆ ಕಾರ್ಯಕರ್ತರು, ಅಮಿತ್ ಶಾ ಹಾಗೂ ಬಿಜೆಪಿ ಮುಖ್ಯ ವಕ್ತಾರ ಮಾಧವ ಭಂಡಾರಿ ಅವರನ್ನು ಶೋಲೆ ಚಿತ್ರದ ಪಾತ್ರಗಳ ಧಿರಿಸಿನಲ್ಲಿ ತೋರಿಸುವ ಪೋಸ್ಟರ್‌ಗಳನ್ನು ಹಚ್ಚಿದ್ದಾರೆ. ಶಿವಸೇನೆಯನ್ನು ಟೀಕಿಸಿ ಬಿಜೆಪಿ ವಕ್ತಾರ ಮಾಧವ ಭಂಡಾರಿಯವರು ಇತ್ತೀಚೆಗೆ ಬರೆದ ತಮ್ಮ ಲೇಖನದಲ್ಲಿ ಬಾಳ ಠಾಕ್ರೆಯವರನ್ನು ಶೋಲೆ ಚಿತ್ರದ ಜೈಲರ್ ಪಾತ್ರಕ್ಕೆ ಹೋಲಿಸಿದ್ದರು. ಇದಕ್ಕೆ ಪ್ರತಿಯಾಗಿ ಶೋಲೆ ಧಿರಿಸಿನಲ್ಲಿ ಶಾ ಅವರನ್ನು ಚಿತ್ರಿಸುವ ಪೋಸ್ಟರ್‌ಗಳನ್ನು ಶಿವಸೇನೆ ಹಚ್ಚಿದೆ.
ಶಿವಸೇನೆ ಕ್ರಮಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಸುನೀತ್ ಸಿಂಗ್ ಠಾಕೂರ್ ಅವರು, ಕಳೆದ ಕೆಲ ದಿನಗಳಿಂದ ಶಿವಸೇನೆ ಕಾರ್ಯಕರ್ತರು ಪ್ರಚೋದನಕಾರಿ ಕೃತ್ಯ ಎಸಗುತ್ತಿದ್ದರೂ ಬಿಜೆಪಿ ಸೌಮ್ಯವಾಗಿಯೇ ಇದೆ. ಇದನ್ನು ಭಿನ್ನವಾಗಿ ಪರಿಗಣಿಸಿದರೆ ತಕ್ಕ ಉತ್ತರ ನೀಡಲು ಬಿಜೆಪಿ ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದ್ದಾರೆ.ಪಕ್ಷದ ರಾಷ್ಟ್ರೀಯ ಮುಖಂಡರನ್ನು ಅವಮಾನಗೊಳಿಸುವ ಪ್ರಯತ್ನಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಕೆಲ ಬಿಜೆಪಿ ಮುಖಂಡರಂತೂ ಬಿಜೆಪಿ ಮುಖವಾಣಿ ಸಾಮ್ನಾವನ್ನು ಸುಡುವಂತೆಯೂ ಕರೆ ನೀಡಿದ್ದರು.